ಅತ್ಯಾಚಾರ ಆರೋಪ: ನೇಪಾಳ ಕ್ರಿಕೆಟಿಗನಿಗೆ 8 ವರ್ಷ ಜೈಲು
Image Source : CRICKETNEP X
ಕಠ್ಮಂಡು : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೇಪಾಳದ ನ್ಯಾಯಾಲಯವೊಂದು ಆ ದೇಶದ ಕ್ರಿಕೆಟಿಗ ಸಂದೀಪ್ ಲಮಿಛಾನೆಗೆ ಬುಧವಾರ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಠ್ಮಂಡು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಿಶಿರ್ ರಾಜ್ ಢಾಕಲ್ರ ನ್ಯಾಯಪೀಠವು, ಸಂದೀಪ್ಹೆ ಮೂರು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಈ ಪೈಕಿ 2 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
23 ವರ್ಷದ ಲಮಿಛಾನೆಯನ್ನು ಡಿಸೆಂಬರ್ ನಲ್ಲಿ ದೋಷಿ ಎಂಬುದಾಗಿ ಘೋಷಿಸಿತ್ತು.
ಲಮಿಛಾನೆ ಒಮ್ಮೆ ನೇಪಾಳ ಕ್ರಿಕೆಟಿನ ಉತ್ಕರ್ಷದ ನೇತೃತ್ವ ವಹಿಸಿದ್ದರು. ಮೈದಾನದಲ್ಲಿ ಲೆಗ್ ಸ್ಪಿನ್ನರ್ ಕಂಡ ಯಶಸ್ಸು ನೇಪಾಳದಲ್ಲಿ ಕ್ರಿಕೆಟ್ ಜನಪ್ರಿಯತೆಯನ್ನು ಹೆಚ್ಚಿಸಿತ್ತು.
ನೇಪಾಳ ತಂಡದ ಮಾಜಿ ನಾಯಕ ಲಮಿಛಾನೆ ಕಠ್ಮಂಡುವಿನ ಹೊಟೇಲೊಂದರಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದಾಗಿ ಕಳೆದ ವಾರ ಆರೋಪಿಸಲಾಗಿತ್ತು. ಬಳಿಕ, ಅವರಿಗೆ ಕಳೆದ ವರ್ಷದ ಜನವರಿಯಲ್ಲಿ ಜಾಮೀನು ನೀಡಲಾಗಿತ್ತು. ತಂಡಕ್ಕೆ ಮರಳಿದ ಅವರು ಅಂತರ್ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.