ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಸೋತ ನೆದರ್ಲ್ಯಾಂಡ್ಸ್
ವಿಶ್ವಕಪ್ 2023 ನಲ್ಲಿ ಎರಡನೇ ಗೆಲುವು ಸಾಧಿಸಿದ ಆಂಗ್ಲರು
Photo : cricketworldcup.com
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ದ ಇಂಗ್ಲೆಂಡ್ 160 ರನ್ ಗಳ ಗೆಲುವು ಸಾಧಿಸಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಇತ್ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದರೂ, ಡಚ್ಚರ ವಿರುದ್ದ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿತು. ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಗೆ ಅಗ್ರ ಎಂಟರೊಳಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಅನಿವಾರ್ಯವಾಗಿತ್ತು.
ಬೆನ್ ಸ್ಟೋಕ್ಸ್ ಭರ್ಜರಿ ಶತಕ ಹಾಗೂ ಕ್ರಿಸ್ ವೋಕ್ಸ್ ಸ್ಟೋಟಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ದ 339 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಕಠಿಣ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಗೆ ಬಂದ ಡಚ್ಚರು, ಇಂಗ್ಲೆಂಡ್ ಆಘಾತಕಾರಿ ಬೌಲಿಂಗ್ ದಾಳಿಗೆ ಕೇವಲ 19 ರನ್ ಗೆ ತನ್ನ ಮೊದಲೆರಡು ವಿಕೆಟ್ ಕಳೆದುಕೊಂಡಿತು. ಮಾಕ್ಸ್ ಓಡೌಡ್ 5 ರನ್ ಗೆ ಕ್ರಿಸ್ ವೋಕ್ಸ್ ಎಸೆತದಲ್ಲಿ ಮೊಯಿನ್ ಗೆ ಕ್ಯಾಚಿತ್ತು ಔಟ್ ಆದರೆ, ಕಾಲಿನ್ ಅಕರ್ಮಾನ್ ಶೂನ್ಯಕ್ಕೆ ಹಾಗೂ ಸೈಬ್ರಾಂಡ್ 33 ರನ್ ಗೆ ಎಡಗೈ ವೇಗಿ ಡೇವಿಡ್ ವಿಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಉತ್ತಮ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದ್ದ ಓಪನರ್ ವೆಸ್ಲಿ ಬ್ಯಾರಸಿ 37 ರನ್ ಗೆ ವೋಕ್ಸ್- ಮೊಯಿನ್ ಜಂಟಿ ಎಸೆತದಲ್ಲಿ ರನೌಟ್ ಗೆ ಬಲಿಯಾದರು. ನಾಯಕ ಎಡ್ವಡ್ಸ್ 38 , ಬಾಸ್ ಡೆ ಲೀಡ್ 10 ರನ್ ಗಳಿಸಿ ಕ್ರಮವಾಗಿ ಮೊಯಿನ್ ಹಾಗೂ ರಶೀದ್ ಗೆ ವಿಕೆಟ್ ನೀಡಿದರು. ಬಳಿಕ ಬ್ಯಾಟಿಂಗ್ ಬಂದ ತೇಜಾ ನಿದಾಮರು 41 ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಕೆಚ್ಚದೆಯ ಹೊರಾಟ ನೀಡದ ಪರಿಣಾಮ 37.2 ಓವರ್ನಲ್ಲಿ 179 ರನ್ ಗೆ ಆಲೌಟ್ ಆದರು. ನೆದರ್ಲ್ಯಾಂಡ್ಸ್ ಪರ ಕಡೆಯಲ್ಲಿ ಲೋಗನ್ ವಾನ್ ಬೀಕ್ 2, ವಾನ್ ಡರ್ ಮರ್ವೆ 0, ಆರ್ಯನ್ ದತ್ 1 ರನ್ ಗಳಿಸಿದ್ದರು.
ಇಂಗ್ಲೆಂಡ್ ಪರ ಮೊಯಿನ್ ಅಲಿ ಹಾಗೂ ಅದಿಲ್ ರಶೀದ್ ತಲಾ ಮೂರು ವಿಕೆಟ್ ಪಡೆದುಕೊಂಡರೆ ಡೇವಿಡ್ ವಿಲ್ಲಿ 2 ವಿಕೆಟ್,ಕ್ರಿಸ್ ವೋಕ್ಸ್ ಒಂದು ವಿಕೆಟ್ ಕಬಳಿಸಿದರು.