ಪಾಕಿಸ್ತಾನದ ಬ್ಯಾಟರ್ ಶಹಝೈಬ್ ಖಾನ್ ರಿಂದ ಹೊಸ ದಾಖಲೆ
ಶಹಝೈಬ್ ಖಾನ್ | PC : PTI
ದುಬೈ : ಐಸಿಸಿ ಅಂಡರ್-19 ಏಶ್ಯ ಕಪ್ನಲ್ಲಿ ಶನಿವಾರ ಭಾರತ ಕ್ರಿಕೆಟ್ ತಂಡದ ವಿರುದ್ಧ 159 ರನ್ ಗಳಿಸಿರುವ ಪಾಕಿಸ್ತಾನದ ಬ್ಯಾಟರ್ ಶಹಝೈಬ್ ಖಾನ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾರೆ.
ಖಾನ್ ಇನಿಂಗ್ಸ್ ನೆರವಿನಿಂದ ಪಾಕಿಸ್ತಾನದ ಅಂಡರ್-19 ತಂಡವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 281 ರನ್ ಗಳಿಸಿತು. ಈ ವೇಳೆ ಖಾನ್ ಹಲವು ದಾಖಲೆಗಳನ್ನು ಪುಡಿಗಟ್ಟಿದರು. ಖಾನ್ 147 ಎಸೆತಗಳಲ್ಲಿ 159 ರನ್ ಗಳಿಸಿದರು.
ಭಾರತದ ಅಂಡರ್-19 ತಂಡದ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸುವ ಮೂಲಕ ತಮ್ಮದೇ ದೇಶದ ಸಮಿ ಅಸ್ಲಾಮ್ ದಾಖಲೆ ಮುರಿದರು. ಅಸ್ಲಾಮ್ 2012ರಲ್ಲಿ 124 ಎಸೆತಗಳಲ್ಲಿ 134 ರನ್ ಗಳಿಸಿದ್ದರು.
ಭಾರತದ ಅಂಡರ್-19 ತಂಡದ ವಿರುದ್ಧ ಸ್ಮರಣೀಯ ಶತಕಗಳನ್ನು ಸಿಡಿಸಿರುವ ಬ್ಯಾಟರ್ಗಳ ಪಟ್ಟಿಗೆ ಖಾನ್ ಸೇರ್ಪಡೆಯಾದರು.
ಆಕ್ರಮಣಕಾರಿ ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನದ ಬ್ಯಾಟರ್ ಖಾನ್ ಒಟ್ಟು 10 ಸಿಕ್ಸರ್ಗಳನ್ನು ಸಿಡಿಸಿದರು. ಯುತ್ ಏಕದಿನ ಕ್ರಿಕೆಟ್ನಲ್ಲಿ ಇನಿಂಗ್ಸ್ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಾಕಿಸ್ತಾನದ ಅಂಡರ್-19 ಬ್ಯಾಟರ್ ಎನಿಸಿಕೊಂಡರು.
ಈ ಹಿಂದೆ 7 ಸಿಕ್ಸರ್ಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದ ಕಮ್ರಾನ್ ಗುಲಾಂ ಸಾಧನೆಯನ್ನು ಹಿಂದಿಕ್ಕಿದರು.
ಖಾನ್ ಅವರು ಆರಂಭಿಕ ಬ್ಯಾಟರ್ ಉಸ್ಮಾನ್ ಖಾನ್(60 ರನ್, 94 ಎಸೆತ) ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿದರು. 159 ರನ್ ಗಳಿಸಿರುವ ಖಾನ್ ಭಾರತದ ಅಂಡರ್-19 ತಂಡದ ವಿರುದ್ಧ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.
*ಭಾರತದ ಅಂಡರ್-19 ತಂಡದ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ಗಳು
ಶಹಝೈಬ್ ಖಾನ್(ಪಾಕಿಸ್ತಾನ): 147 ಎಸೆತಗಳಲ್ಲಿ 159 ರನ್(2024)
ಸಮಿ ಅಸ್ಲಾಮ್(ಪಾಕಿಸ್ತಾನ): 124 ಎಸೆತಗಳಲ್ಲಿ 134 ರನ್(2012)
ಕಾಲಿನ್ ಅಕರ್ಮನ್(ದಕ್ಷಿಣ ಆಫ್ರಿಕಾ): 113 ಎಸೆತಗಳಲ್ಲಿ ಔಟಾಗದೆ 129 ರನ್(2009)
ಕದೀರ್ ಅಲಿ(ಇಂಗ್ಲೆಂಡ್): 122 ಎಸೆತಗಳಲ್ಲಿ 125 ರನ್(2002)