ನ್ಯೂಝಿಲ್ಯಾಂಡ್ ವಿರುದ್ಧ ಇನಿಂಗ್ಸ್, 154 ರನ್ ಜಯ |15 ವರ್ಷಗಳ ಟೆಸ್ಟ್ ಸರಣಿ ಬರ ನೀಗಿಸಿಕೊಂಡ ಶ್ರೀಲಂಕಾ ಕ್ರಿಕೆಟ್ ತಂಡ
PC : PTI
ಗಾಲೆ : ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ರವಿವಾರ ನಿರೀಕ್ಷೆಯಂತೆಯೇ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಇನಿಂಗ್ಸ್ ಹಾಗೂ 154 ರನ್ ಅಂತರದಿಂದ ಭರ್ಜರಿಯಾಗಿ ಮಣಿಸಿರುವ ಆತಿಥೇಯ ಶ್ರೀಲಂಕಾ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಈ ಗೆಲುವಿನ ಮೂಲಕ ಕಿವೀಸ್ ಪಡೆಯ ವಿರುದ್ದ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಶ್ರೀಲಂಕಾ ತಂಡವು 15 ವರ್ಷಗಳ ನಂತರ ಮೊದಲ ಬಾರಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ವಶಪಡಿಸಿಕೊಂಡಿತು.
ಎರಡು ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ಗಳನ್ನು ಉರುಳಿಸುವ ಮೂಲಕ ಅಮೋಘ ಪ್ರದರ್ಶನ ನೀಡಿ ಸರಣಿಯುದ್ದಕ್ಕೂ ಮಿಂಚಿದ್ದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಔಟಾಗದೆ 182 ರನ್ ಗಳಿಸಿ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 602 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಲು ನೆರವಾಗಿದ್ದ ಮಧ್ಯಮ ಸರದಿಯ ಬ್ಯಾಟರ್ ಕಮಿಂದು ಮೆಂಡಿಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
182 ರನ್ ಗಳಿಸುವ ಮೂಲಕ ಮೆಂಡಿಸ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ವೇಗದಲ್ಲಿ 1,000 ರನ್ ಪೂರೈಸಿ ಕ್ರಿಕೆಟ್ ದಂತಕತೆ ಸರ್ ಡಾನ್ ಬ್ರಾಡ್ಮನ್ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ಗಳನ್ನು ಉರುಳಿಸಿದ್ದ ಸ್ಪಿನ್ನರ್ ಜಯಸೂರ್ಯ ಎರಡನೇ ಟೆಸ್ಟ್ನಲ್ಲಿ ಮತ್ತೊಮ್ಮೆ ನ್ಯೂಝಿಲ್ಯಾಂಡ್ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡುವ ಮೂಲಕ 9 ವಿಕೆಟ್ಗಳನ್ನು ಉರುಳಿಸಿದ್ದರು. ಕಿವೀಸ್ ಬ್ಯಾಟರ್ಗಳು ಲಂಕಾದ ಸ್ಪಿನ್ ದಾಳಿ ಎದುರು ರನ್ಗಾಗಿ ಪರದಾಟ ನಡೆಸಿದರು.
ಚೊಚ್ಚಲ ಪಂದ್ಯವನ್ನಾಡಿರುವ ಸ್ಪಿನ್ನರ್ ನಿಶಾನ್ ಪೆರಿಸ್ ಎರಡನೇ ಇನಿಂಗ್ಸ್ನಲ್ಲಿ ಐದು ವಿಕೆಟ್ ಗೊಂಚಲು(6-170) ಸಹಿತ ಒಟ್ಟು 9 ವಿಕೆಟ್ಗಳನ್ನು ಉರುಳಿಸಿ ಗಮನ ಸೆಳೆದರು.
ತನ್ನ ಮೊದಲ ಇನಿಂಗ್ಸ್ನಲ್ಲಿಯೇ ಕೇವಲ 88 ರನ್ಗೆ ಸರ್ವಪತನ ಕಂಡಿದ್ದ ನ್ಯೂಝಿಲ್ಯಾಂಡ್ 2ನೇ ಟೆಸ್ಟ್ ಪಂದ್ಯದಲ್ಲಿ ನೀರಸ ಆರಂಭ ಪಡೆದಿತ್ತು. ಆ ನಂತರ ಫಾಲೋ ಆನ್ಗೆ ಸಿಲುಕಿದ್ದ ನ್ಯೂಝಿಲ್ಯಾಂಡ್ ತನ್ನ ಎರಡನೇ ಇನಿಂಗ್ಸ್ನಲ್ಲಿ 360 ರನ್ ಗಳಿಸಿ ಒಂದಷ್ಟು ಹೋರಾಟ ನೀಡಿದೆ. ನ್ಯೂಝಿಲ್ಯಾಂಡ್ ಪ್ರಸಕ್ತ ಸರಣಿಯಲ್ಲಿ ಗಾಲೆ ಕ್ರೀಡಾಂಗಣದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದರೂ ಇದು ಇನಿಂಗ್ಸ್ ಸೋಲಿನಿಂದ ಪಾರಾಗಲು ಸಾಕಾಗಲಿಲ್ಲ.
ದ್ವಿತೀಯ ಇನಿಂಗ್ಸ್ನಲ್ಲಿ ಗ್ಲೆನ್ ಫಿಲಿಪ್ಸ್ (78 ರನ್),ಮಿಚೆಲ್ ಸ್ಯಾಂಟ್ನರ್(67 ರನ್)ಹಾಗೂ ಟಾಮ್ ಬ್ಲಂಡೆಲ್(60 ರನ್) ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೀಲಂಕಾದ ಪ್ರಾಬಲ್ಯದ ಎದುರು ಪ್ರವಾಸಿಗರು ಇನ್ನಷ್ಟು ಸವಾಲೊಡ್ಡುವ ಅಗತ್ಯವಿತ್ತು.
4ನೇ ದಿನದಾಟವಾದ ರವಿವಾರ 5 ವಿಕೆಟ್ಗಳ ನಷ್ಟಕ್ಕೆ 199 ರನ್ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ನ್ಯೂಝಿಲ್ಯಾಂಡ್ ತಂಡ ಭೋಜನ ವಿರಾಮಕ್ಕೆ ಮೊದಲು ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಶ್ರೀಲಂಕಾವು ಮೂರು ಕ್ಯಾಚ್ಗಳನ್ನು ಕೈಚೆಲ್ಲಿ ಫೀಲ್ಡಿಂಗ್ನಲ್ಲಿ ತಪ್ಪೆಸಗಿದ ಹೊರತಾಗಿಯೂ ಕಿವೀಸ್ ಪಡೆ ಭೋಜನ ವಿರಾಮದ ನಂತರ ತನ್ನ ಹೋರಾಟ ಮುಗಿಸಿತು.
ಜಯಸೂರ್ಯ ಅವರಿ ಅಜಾಝ್ ಪಟೇಲ್ (22 ರನ್) ವಿಕೆಟನ್ನು ಪಡೆದರೆ, ಪೆರಿಸ್ ಅವರು ಸ್ಯಾಂಟ್ನರ್ ವಿಕೆಟ್ ಉರುಳಿಸುವ ಮೂಲಕ ಕಿವೀಸ್ ಇನಿಂಗ್ಸ್ಗೆ ತೆರೆ ಎಳೆದರು.
ಇನಿಂಗ್ಸ್ ಅಂತರದ ಗೆಲುವಿನ ಮೂಲಕ ಶ್ರೀಲಂಕಾ ಕ್ರಿಕೆಟ್ ತಂಡವು ಸತತ ಮೂರನೇ ಟೆಸ್ಟ್ ಪಂದ್ಯವನ್ನು ಜಯಿಸಿದಂತಾಗಿದೆ. ಮುಂದಿನ ವರ್ಷದ ಜೂನ್ನಲ್ಲಿ ಲಾರ್ಡ್ಸ್ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅರ್ಹತೆ ಪಡೆಯುವ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್: 602/5 ಡಿಕ್ಲೇರ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 88 ರನ್ಗೆ ಆಲೌಟ್
ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್: 360 ರನ್ಗೆ ಆಲೌಟ್
(ಗ್ಲೆನ್ ಫಿಲಿಪ್ಸ್ 78, ಮಿಚೆಲ್ ಸ್ಯಾಂಟ್ನರ್ 67, ಟಾಮ್ ಬ್ಲಂಡೆಲ್ 60, ಡೆವೊನ್ ಕಾನ್ವೆ 61, ವಿಲಿಯಮ್ಸನ್ 46, ನಿಶಾನ್ ಪೆರಿಸ್ 6-170, ಪ್ರಭಾತ್ ಜಯಸೂರ್ಯ 3-139)
ಪಂದ್ಯಶ್ರೇಷ್ಠ: ಕಮಿಂದು ಮೆಂಡಿಸ್
ಸರಣಿಶ್ರೇಷ್ಠ: ಪ್ರಭಾತ್ ಜಯಸೂರ್ಯ.