ಗೆಲುವಿನ ಓಟ ಮುಂದುವರಿಸುವತ್ತ ಚಿತ್ತ ನೆಟ್ಟಿರುವ ಭಾರತಕ್ಕೆ ನಾಳೆ (ಅ.22) ನ್ಯೂಝಿಲ್ಯಾಂಡ್ ಸವಾಲು
Photo- PTI
ಧರ್ಮಶಾಲಾ: ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಆತಿಥೇಯ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ರವಿವಾರ ಎಚ್ಪಿಸಿಎ ಸ್ಟೇಡಿಯಮ್ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿನ ಗೆಲುವು ಉಭಯ ತಂಡಗಳನ್ನು ಸೆಮಿ ಫೈನಲ್ಗೆ ನಿಕಟವಾಗಿಸಲಿದೆ.
ಈ ಎರಡು ತಂಡಗಳು ಪ್ರಸಕ್ತ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಆಡಿದ್ದು, ಎಲ್ಲ 4 ಪಂದ್ಯಗಳಲ್ಲೂ ಜಯ ಸಾಧಿಸಿವೆ. ಉತ್ತಮ ರನ್ರೇಟ್ ಆಧಾರದಲ್ಲಿ ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
2019ರ ಆವೃತ್ತಿಯ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ಭಾರತವನ್ನು ಸೋಲಿಸಿದ್ದ ನ್ಯೂಝಿಲ್ಯಾಂಡ್ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು. ಧರ್ಮಶಾಲಾದ ವಾತಾವರಣವು ನ್ಯೂಝಿಲ್ಯಾಂಡ್ಗೆ ಒಪ್ಪುವಂತಿದ್ದರೂ ಭಾರತವು ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯು ಭಾರತಕ್ಕೆ ಹಿನ್ನಡೆಯಾಗಿದೆ. ಪಾಂಡ್ಯ ಗೈರು ಹಾಜರಿಯಲ್ಲಿ ಆಡುವ 11 ಬಳಗದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆಯಿದೆ. ಪಾಂಡ್ಯ ಗಾಯಗೊಂಡಿರುವುದು ಭಾರತದ ಸಮತೋಲನದ ಮೇಲೆ ಪರಿಣಾಮಬೀರಿದೆ.
ಆಡುವ 11ರ ಬಳಗದಲ್ಲಿ ಹಾರ್ದಿಕ್ ಸ್ಥಾನಕ್ಕೆ ಮುಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆಯಿದೆ. ಧರ್ಮಶಾಲಾ ವಾತಾವರವು ವೇಗದ ಬೌಲರ್ಗಳಿಗೆ ಪೂರಕವಾಗಿದೆ. ಬ್ಯಾಟಿಂಗ್ಗೆ ಶಕ್ತಿ ನೀಡಲು ಸೂರ್ಯಕುಮಾರ್ ಯಾದವ್ರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. ಯಾದವ್ಗೆ ಯಾರು ದಾರಿ ಮಾಡಿಕೊಡಲಿದ್ದಾರೆಂದು ನೋಡಬೇಕಾಗಿದೆ. ಶಮಿ ಅವರ ವೇಗ ಹಾಗೂ ಸ್ವಿಂಗ್ ಈ ವಾತಾವರಣದಲ್ಲಿ ಭಾರತಕ್ಕೆ ಲಾಭದಾಯಕವಾಗಲಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಹಾಗೂ ಶುಭಮನ್ ಗಿಲ್ ನೇತೃತ್ವದ ಭಾರತದ ಬ್ಯಾಟಿಂಗ್ ಸರದಿಯು ಅತ್ಯುತ್ತಮ ಫಾರ್ಮ್ನಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಟ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ವಿಶ್ವಕಪ್ನಲ್ಲಿ ಭಾರತ ಹಾಗೂ ನ್ಯೂಝಿಲ್ಯಾಂಡ್ ಒಟ್ಟು 9 ಪಂದ್ಯಗಳನ್ನು ಆಡಿದ್ದು, ಈ ಪೈಕಿ ನ್ಯೂಝಿಲ್ಯಾಂಡ್ 5 ಬಾರಿ ಜಯ ಸಾಧಿಸಿ ಹೆಡ್-ಟು-ಹೆಡ್ ದಾಖಲೆಯಲ್ಲಿ 5-4 ಮುನ್ನಡೆಯಲ್ಲಿದೆ.
1987ರಲ್ಲಿ ನಾಗ್ಪುರದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಚೇತನ್ ಶರ್ಮಾ ಹ್ಯಾಟ್ರಿಕ್ ಬಾಚಿಕೊಂಡರೆ,ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(ಔಟಾಗದೆ 103, 88 ಎಸೆತ)ತನ್ನ ಚೊಚ್ಚಲ ಏಕದಿನ ಶತಕ ಗಳಿಸಿದ್ದರು.
ಅಹ್ಮದಾಬಾದ್ನಲ್ಲಿ ಅ.5ರಂದು ನಡೆದಿದ್ದ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ನಂತರ ಗೆಲುವಿನ ಲಯ ಕಾಯ್ದುಕೊಂಡ ನ್ಯೂಝಿಲ್ಯಾಂಡ್ ಆ ನಂತರ ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡವನ್ನು ಮಣಿಸಿತ್ತು.
ಭಾರತ ವಿರುದ್ಧ ಅದರದೇ ನೆಲದಲ್ಲಿ ಆಡುವುದು ನ್ಯೂಝಿಲ್ಯಾಂಡ್ಗೆ ಸವಾಲಾಗಿದೆ. ಖಾಯಂ ನಾಯಕ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ ನ್ಯೂಝಿಲ್ಯಾಂಡ್ ಬ್ಯಾಟಿಂಗ್ ವಿಭಾಗವು ಜವಾಬ್ದಾರಿಯನ್ನು ಹಂಚಿಕೊಂಡು ಆಡುತ್ತಿದೆ. ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಬೌಲಿಂಗ್ ದಾಳಿ ಬಲಿಷ್ಠವಾಗಿದೆ.