ಐಸಿಸಿ ವಿಶ್ವಕಪ್ 2023: ನ್ಯೂಜಿಲೆಂಡ್ ಗೆ 9 ವಿಕೆಟ್ ಗಳ ಜಯ
152 ರನ್ ಗಳಿಸಿದ ಡೆವೋನ್ ಕಾನ್ವೆ
PHOTO : PTI
ಅಹ್ಮದಾಬಾದ್ : ಎಡಗೈ ಬ್ಯಾಟರ್ಗಳಾದ ಡೆವೊನ್ ಕಾನ್ವೇ(ಔಟಾಗದೆ 152 ರನ್, 121 ಎಸೆತ, 19 ಬೌಂಡರಿ, 3 ಸಿಕ್ಸರ್) ಹಾಗೂ ರಚಿನ್ ರವೀಂದ್ರ(ಔಟಾಗದೆ 123 ರನ್, 96 ಎಸೆತ, 11 ಬೌಂಡರಿ, 5 ಸಿಕ್ಸರ್) ಭರ್ಜರಿ ಜೊತೆಯಾಟದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಏಕಪಕ್ಷೀಯವಾಗಿ ಸಾಗಿದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 9 ವಿಕೆಟ್ ಗಳಿಂದ ಸುಲಭವಾಗಿ ಮಣಿಸಿ ಶುಭಾರಂಭ ಮಾಡಿದೆ. ಈ ಗೆಲುವಿನ ಮೂಲಕ 4 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್ ನಲ್ಲಿನ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ವೇಗಿ ಮ್ಯಾಟ್ ಹೆನ್ರಿ(3-48), ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್(2-37) ಹಾಗೂ ಪಾರ್ಟ್ಟೈಮ್ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್(2-17) ಆಂಗ್ಲರ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಗೆಲ್ಲಲು 283 ರನ್ ಗುರಿ ಬೆನ್ನಟ್ಟಿದ ಕಿವೀಸ್ ತಂಡ 1 ವಿಕೆಟ್ ನಷ್ಟದಲ್ಲಿ ಇನ್ನೂ 82 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಕಿವೀಸ್ ಇನಿಂಗ್ಸ್ ನ 2ನೇ ಓವರ್ನಲ್ಲಿ ವಿಲ್ ಯಂಗ್(0)ವಿಕೆಟನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಆಗ ಜೊತೆಯಾದ ಡೆವೊನ್ ಕಾನ್ವೇ ಹಾಗೂ ರವೀಂದ್ರ 2ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 273 ರನ್ ಸೇರಿಸಿದರು. ನ್ಯೂಝಿಲ್ಯಾಂಡ್ ಪರ ಏಕದಿನ ಕ್ರಿಕೆಟ್ ಲ್ಲಿ 2ನೇ ವಿಕೆಟ್ ನಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಗಪ್ಟಿಲ್ ಹಾಗೂ ವಿಲ್ ಯಂಗ್ ನಿರ್ಮಿಸಿದ್ದ ದಾಖಲೆಯ ಜೊತೆಯಾಟವನ್ನು(203 ರನ್) ಮುರಿದು ಮುನ್ನುಗ್ಗಿದರು.
ಕಾನ್ವೇ 5ನೇ ಶತಕ: ಕಿವೀಸ್ ಓಪನರ್ ಕಾನ್ವೇ ಈ ವರ್ಷದ ವಿಶ್ವಕಪ್ನಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. 32ರ ಹರೆಯದ ಕಾನ್ವೇ ಕೇವಲ 83 ಎಸೆತಗಳಲ್ಲಿ ತನ್ನ 5ನೇ ಶತಕ ಪೂರೈಸಿದರು. 23 ಏಕದಿನ ಪಂದ್ಯಗಳಲ್ಲಿ 1,000 ರನ್ ಪೂರೈಸಿದರು.
ಇನ್ನೋರ್ವ ಎಡಗೈ ಬ್ಯಾಟರ್ ಹಾಗೂ ಭಾರತದ ಸಂಜಾತ ರಚಿನ್ ರವೀಂದ್ರ ಕೂಡ 82 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದರು. 23ರ ಹರೆಯದ ರಚಿನ್ 121.95ರ ಸ್ಟ್ರೈಕ್ ರೇಟ್ ನಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಅಬ್ಬರದ ಬ್ಯಾಟಿಂಗ್ ಮಾಡಿದ ರವೀಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಂಗ್ಲೆಂಡ್ ಬೌಲರ್ ಗಳನ್ನು ಹಿಗ್ಗಾಮುಗ್ಗ ದಂಡಿಸಿದ ಈ ಇಬ್ಬರು ಆಟಗಾರರು ಕಿವೀಸ್ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ 2019ರ ವಿಶ್ವಕಪ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಆಗ ಇಂಗ್ಲೆಂಡ್ ರೋಚಕ ಜಯ ಸಾಧಿಸಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿತ್ತು.
ಇಂಗ್ಲೆಂಡ್ 282/9: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಗೆ ಜೋ ರೂಟ್(77 ರನ್, 86 ಎಸೆತ, 4 ಬೌಂಡರಿ, 1 ಸಿಕ್ಸರ್)ತಂಡಕ್ಕೆ ಆಸರೆಯಾದರು. ಮಾಜಿ ಟೆಸ್ಟ್ ನಾಯಕ ರೂಟ್ 57 ಎಸೆತಗಳಲ್ಲಿ 37ನೇ ಅರ್ಧಶತಕವನ್ನು ಸಿಡಿಸಿದರು.
ಇಂಗ್ಲೆಂಡ್ ಪರ ಸರ್ವಾಧಿಕ ಸ್ಕೋರ್ ಗಳಿಸಿದ ರೂಟ್ ಅವರಿಗೆ ಫಿಲಿಪ್ಸ್ ಪೆವಿಲಿಯನ್ ಹಾದಿ ತೋರಿಸಿದರು. ನಾಯಕ ಜೋಸ್ ಬಟ್ಲರ್(43 ರನ್, 42 ಎಸೆತ), ಜಾನಿ ಬೈರ್ಸ್ಟೋವ್(33 ರನ್, 35 ಎಸೆತ) ಒಂದಷ್ಟು ಹೋರಾಟ ನೀಡಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 50 ಓವರ್ಗಳಲ್ಲಿ 282/9
(ರೂಟ್ 77, ಬಟ್ಲರ್ 43, ಮ್ಯಾಟ್ ಹೆನ್ರಿ 3-43, ಸ್ಯಾಂಟ್ನರ್ 2-37, ಫಿಲಿಪ್ಸ್ 2-17)
ನ್ಯೂಝಿಲ್ಯಾಂಡ್: 36.2 ಓವರ್ಗಳಲ್ಲಿ 283/1
(ಡೆವೊನ್ ಕಾನ್ವೇ ಔಟಾಗದೆ 152, ರಚಿನ್ ರವೀಂದ್ರ ಔಟಾಗದೆ 123, ಕರ್ರನ್ 1-47)
ಪಂದ್ಯಶ್ರೇಷ್ಠ: ರಚಿನ್ ರವೀಂದ್ರ