ಹಾರ್ದಿಕ್ ಪಾಂಡ್ಯ ನಾಯಕತ್ವದ ಶೈಲಿಗೆ ಮುಂಬೈ ಇಂಡಿಯನ್ಸ್ ಸೀನಿಯರ್ ಆಟಗಾರರ ಅಸಮಾಧಾನ: ವರದಿ
ಹಾರ್ದಿಕ್ ಪಾಂಡ್ಯ | PC : NDTV
ಹೊಸದಿಲ್ಲಿ: ಸನ್ರೈಸರ್ಸ್ ಹೈದರಾಬಾದ್ ತಂಡ ಬುಧವಾರ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 10 ವಿಕೆಟ್ ಗಳ ಅಂತರದಿಂದ ಸದೆಬಡಿದ ಬೆನ್ನಿಗೇ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್ನಿಂದ ಔಪಚಾರಿಕವಾಗಿ ಹೊರಗುಳಿಯಿತು.
ಐಪಿಎಲ್ ಋತುವಿನುದ್ದಕ್ಕೂ ತಂಡದ ನೈತಿಕ ಸ್ಥೈರ್ಯ ಕುಸಿಯುತ್ತಿರುವುದನ್ನು ಉಲ್ಲೇಖಿಸಿ ತಂಡದ ಕೆಲವು ಹಿರಿಯ ಆಟಗಾರರು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಶೈಲಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಲಿನ ನಂತರ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಸಭೆಯನ್ನು ಕರೆದು ಮೂಲಭೂತ ವಿಷಯವೆಂದು ಭಾವಿಸಿದ್ದನ್ನು ಚರ್ಚಿಸಿದರು. ಸಮಸ್ಯೆಯನ್ನು ಗುರುತಿಸಲು ಪ್ರತ್ಯೇಕ ಸಭೆಗಳನ್ನು ಕೂಡ ನಡೆಸಲಾಯಿತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ತಂಡ ಸೋತ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಪಾಂಡ್ಯ, ತಿಲಕ್ ವರ್ಮಾ ಅವರು ಅಕ್ಷರ್ ಪಟೇಲ್ರನ್ನು ಹೆಚ್ಚು ಗುರಿಯಾಗಿರಿಸಿಕೊಂಡು ಬ್ಯಾಟ್ ಮಾಡಬೇಕಿತ್ತು. ತಂಡದ ಸೋಲಿಗೆ ಆಟದ ಜ್ಞಾನದ ಕೊರತೆ ಕಾರಣ ಎಂದು ಹೇಳಿದ್ದರು.
ತಿಲಕ್ ವರ್ಮಾ(12 ಪಂದ್ಯ, 384 ರನ್) ಈ ಋತುವಿನಲ್ಲಿ ಮುಂಬೈ ತಂಡದ ಪರ ಅತ್ಯಧಿಕ ಸ್ಕೋರರ್ ಆಗಿದ್ದರು. ಡೆಲ್ಲಿ ವಿರುದ್ಧ 32 ಎಸೆತಗಳಲ್ಲಿ 63 ರನ್ ಗಳಿಸಿ ಆಕರ್ಷಕ ಇನಿಂಗ್ಸ್ ಆಡಿದ್ದರು.
ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಇನ್ನೂ 2 ಪಂದ್ಯ ಆಡಲು ಬಾಕಿ ಇದೆ. ಮುಂಬೈ ಫ್ರಾಂಚೈಸಿ ಪ್ಲೇ ಆಫ್ ರೇಸ್ನಿಂದ ಹೊರಗುಳಿದಿದ್ದು, ಮುಂಬರುವ ಋತುವಿನಲ್ಲಿ ತಂಡ ಆರನೇ ಐಪಿಎಲ್ ಚಾಂಪಿಯನ್ಶಿಪ್ ಬಾಚಿಕೊಳ್ಳಲು ಈಗಲೇ ತಯಾರಿ ನಡೆಸಲು ನಿರ್ಣಾಯಕ ಕಾರ್ಯತಂತ್ರ ರೂಪಿಸಲು ಮ್ಯಾನೇಜ್ಮೆಂಟ್ ಮುಂದಾಗಿದೆ.