ಚೀನಾ ಆಟಗಾರ್ತಿ ಝೆಂಗ್ ಎರಡನೇ ಸುತ್ತಿಗೆ ಲಗ್ಗೆ: ಸೋಲಿನೊಂದಿಗೆ ನಿವೃತ್ತಿಯಾದ ಕಾರ್ನೆಟ್
ಪ್ಯಾರಿಸ್: ಅಲಿಝ್ ಕಾರ್ನೆಟ್ ರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿದ ಏಳನೇ ಶ್ರೆಯಾಂಕದ ಝೆಂಗ್ ಕ್ವಿನ್ವೆನ್ ಫ್ರೆಂಚ್ ಓಪನ್ ನಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಝೆಂಗ್ ಅವರು 34ರ ವಯಸ್ಸಿನ ಕಾರ್ನೆಟ್ ರನ್ನು 6-2, 6-1 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಕಾರ್ನೆಟ್ ಸೋಲಿನೊಂದಿಗೆ ತನ್ನ ತಾಯ್ನಾಡಿನಲ್ಲಿ ಗ್ರ್ಯಾನ್ಸ್ಲಾಮ್ ಟೂರ್ನಿಗೆ ವಿದಾಯ ಹೇಳಿದರು.
ಟೆನಿಸ್ ನ ಓಪನ್ ಯುಗದಲ್ಲಿ ಸತತವಾಗಿ ಗ್ರ್ಯಾನ್ಸ್ಲಾಮ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಕಾಣಿಸಿಕೊಂಡಿರುವ ದಾಖಲೆ ಹೊಂದಿರುವ ಕಾರ್ನೆಟ್ ಪ್ಯಾರಿಸ್ ಓಪನ್ ಟೂರ್ನಮೆಂಟ್ ನಂತರ 20 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದರು.
ಸಿಂಗಲ್ಸ್ ವಿಭಾಗದಲ್ಲಿ ಸೋಲುಂಡ ಹೊರತಾಗಿಯೂ ಕಾರ್ನೆಟ್ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದ್ದಾರೆ.
ಪ್ಯಾರಿಸ್ ನಲ್ಲಿ ಮಳೆ ಸುರಿಯುತ್ತಿರುವ ಕಾರಣ ಫಿಲಿಪ್ ಚಾಟ್ರಿಯರ್ ಟೆನಿಸ್ ಅಂಗಣದ ಛಾವಣಿ ಅಡಿ ಆಡಿದ ಕಾರ್ನೆಟ್ ಉತ್ತಮ ಹೋರಾಟ ನೀಡಿದರೂ ಝೆಂಗ್ ಅವರ ಶಕ್ತಿಶಾಲಿ ಹೊಡೆತದ ಮುಂದೆ ಮಂಕಾದರು. ಝೆಂಗ್ ಬೇಗನೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ರೋಮ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಝೆಂಗ್ ಫ್ರೆಂಚ್ ಓಪನ್ಗೆ ಆಗಮಿಸಿದ್ದ ಕಾರ್ನೆಟ್ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದರು. ಆದರೆ ಅವರಿಗೆ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಪಂದ್ಯದ ನಂತರ ಝೆಂಗ್ ಅವರು ಮೈದಾನದಲ್ಲಿ ಕಾರ್ನೆಟ್ ಅನ್ನು ಆಲಿಂಗಿಸಿಕೊಂಡರು. ಪ್ರಧಾನ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಸ್ಥಳೀಯ ಆಟಗಾರ್ತಿಗೆ ಗೌರವಿಸಿದರು.
ಚೀನಾದ ಆಟಗಾರ್ತಿ ಝೆಂಗ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಆಶ್ಲಿನ್ ಕ್ರೂಗರ್ ಅಥವಾ ಜರ್ಮನಿಯ ತಮಾರಾ ಕೊರ್ಪಾಟ್ಚ್ರನ್ನು ಎದುರಿಸಲಿದ್ದಾರೆ.