ನನ್ನ ಇನ್ಸ್ಟಾಗ್ರಾಮ್ ಗಳಿಕೆಯ ಕುರಿತ ವರದಿಗಳು ಸುಳ್ಳು: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (PTI)
ಹೊಸದಿಲ್ಲಿ: ತನ್ನ ಭಾವಚಿತ್ರ ಹಂಚಿಕೆಯ ಸಾಮಾಜಿಕ ಮಾಧ್ಯಮ ತಂತ್ರಾಂಶವಾದ ಇನ್ಸ್ಟಾಗ್ರಾಮ್ ಮೂಲಕ ತಾನು 11.45 ಕೋಟಿಯಷ್ಟು ಭಾರಿ ಮೊತ್ತವನ್ನು ಗಳಿಸುತ್ತಿದ್ದೇನೆ ಎಂಬ ವರದಿಗಳನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಲ್ಲಗಳೆದಿದ್ದಾರೆ.
“ನಾನು ನನ್ನ ಜೀವನದಲ್ಲಿ ಗಳಿಸಿರುವ ಎಲ್ಲದಕ್ಕೂ ಕೃತಜ್ಞನಾಗಿದ್ದೇನೆ ಮತ್ತು ಆಭಾರಿಯಾಗಿದ್ದೇನೆ. ಆದರೆ, ನನ್ನ ಸಾಮಾಜಿಕ ಮಾಧ್ಯಮದ ಗಳಿಕೆಯ ಕುರಿತು ಹರಿದಾಡುತ್ತಿರುವ ಸುದ್ದಿಯು ಸತ್ಯವಲ್ಲ” ಎಂದು ಅವರು ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಇದಕ್ಕೂ ಮುನ್ನ ಇನ್ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಧಿಕ ಗಳಿಕೆ ಮಾಡುತ್ತಿರುವ ಭಾರತೀಯ ವಿರಾಟ್ ಕೊಹ್ಲಿ ಎಂಬ ವರದಿಗಳು ಪ್ರಕಟವಾಗಿದ್ದವು. ಅದೇ ವರದಿಯ ಪ್ರಕಾರ, ರೊನಾಲ್ಡೊ ಹಂಚಿಕೊಳ್ಳುವ ಪ್ರತಿ ಪ್ರಾಯೋಜಿತ ಪೋಸ್ಟ್ ಗೆ 3.23 ದಶಲಕ್ಷ ಡಾಲರ್ ಗಳಿಸುತ್ತಿದ್ದು, ಅದು ಭಾರತೀಯ ರೂಪಾಯಿಯಲ್ಲಿ ಸರಿಸುಮಾರು 26.75 ಕೋಟಿಯಾಗುತ್ತದೆ ಎಂದು ಹೇಳಲಾಗಿತ್ತು. ಅವರ ನಿಕಟ ಪ್ರತಿಸ್ಪರ್ಧಿ ಮೆಸ್ಸಿ, ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ ಗೆ 2.56 ದಶಲಕ್ಷ ಡಾಲರ್ (ರೂ. 21.49 ಕೋಟಿ) ಗಳಿಸುವ ಮೂಲಕ ಎರಡನೆಯ ಸ್ಥಾನದಲ್ಲಿದ್ದಾರೆ ಎಂದೂ ಹೇಳಲಾಗಿತ್ತು.
ಆಗಸ್ಟ್ 30ರಿಂದ ಪ್ರಾರಂಭವಾಗಲಿರುವ ಏಶ್ಯಾ ಕಪ್-2023ಗಾಗಿ ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ಸದ್ಯ ವಿಶ್ರಾಂತಿ ನೀಡಿದೆ.