ನಿಕೊಲಸ್ ಪೂರನ್, ಕೆ.ಎಲ್.ರಾಹುಲ್ ಅರ್ಧಶತಕ: ಮುಂಬೈ ಗೆಲುವಿಗೆ 215 ರನ್ ಸವಾಲು ನೀಡಿದ ಲಕ್ನೊ ಸೂಪರ್ ಜಯಂಟ್ಸ್
ಕೆ.ಎಲ್.ರಾಹುಲ್ | PC : PTI
ಮುಂಬೈ: ನಿಕೊಲಸ್ ಪೂರನ್(75 ರನ್, 29 ಎಸೆತ, 5 ಬೌಂಡರಿ, 8 ಸಿಕ್ಸರ್)ಹಾಗೂ ಕೆ.ಎಲ್.ರಾಹುಲ್(55 ರನ್, 41 ಎಸೆತ, 3 ಬೌಂಡರಿ, 3 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡ 67ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 215 ರನ್ ಗುರಿ ನೀಡಿದೆ.
ಶುಕ್ರವಾರ ವಾಂಖೆಡೆ ಸ್ಟೇಡಿಯಮ್ನಲ್ಲಿ ಟಾಸ್ ಜಯಿಸಿದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಲಕ್ನೊ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು.
ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 214 ರನ್ ಗಳಿಸಿದೆ.
ಇನಿಂಗ್ಸ್ನ ಮೊದಲ ಓವರ್ನ 3ನೇ ಎಸೆತದಲ್ಲಿ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್(0)ವಿಕೆಟನ್ನು ಕಳೆದುಕೊಂಡ ಲಕ್ನೊ ಕಳಪೆ ಆರಂಭ ಪಡೆಯಿತು. ಮಾರ್ಕಸ್ ಸ್ಟೋಯಿನಿಸ್(28 ರನ್, 22 ಎಸೆತ), ದೀಪಕ್ ಹೂಡಾ(11 ರನ್, 9 ಎಸೆತ)ವಿಕೆಟ್ ಪತನಗೊಂಡಾಗ ಲಕ್ನೊ 3 ವಿಕೆಟ್ಗಳ ನಷ್ಟಕ್ಕೆ 69 ರನ್ ಗಳಿಸಿತ್ತು.
ಆಗ ಜೊತೆಯಾದ ರಾಹುಲ್ ಹಾಗೂ ಪೂರನ್ 4ನೇ ವಿಕೆಟ್ಗೆ 44 ಎಸೆತಗಳಲ್ಲಿ 109 ರನ್ ಜೊತೆಯಾಟ ನಡೆಸಿದರು. ಪೂರನ್ ಔಟಾದ ಬೆನ್ನಿಗೇ ಅರ್ಷದ್ ಖಾನ್(0) ಹಾಗೂ ಕೆ.ಎಲ್.ರಾಹುಲ್ ಔಟಾದಾಗ ಲಕ್ನೊ ಕುಸಿತ ಕಂಡಿತು.
7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 17 ಎಸೆತಗಳಲ್ಲಿ 36 ರನ್ ಸೇರಿಸಿದ ಕೃನಾಲ್ ಪಾಂಡ್ಯ(12 ರನ್, 7 ಎಸೆತ) ಹಾಗೂ ಆಯುಷ್ ಬದೋನಿ(ಔಟಾಗದೆ 22, 10 ಎಸೆತ) ತಂಡದ ಮೊತ್ತವನ್ನು 214ಕ್ಕೆ ತಲುಪಿಸಿದರು.
ಮುಂಬೈ ನಾಯಕ ಪಾಂಡ್ಯ 8 ಬೌಲರ್ಗಳನ್ನು ದಾಳಿಗಿಳಿಸಿದ್ದು ಈ ಪೈಕಿ ನುವಾನ್ ತುಷಾರ(3-28) ಹಾಗೂ ಪಿಯೂಷ್ ಚಾವ್ಲಾ(3-29) ತಲಾ ಮೂರು ವಿಕೆಟ್ಗಳನ್ನು ಉರುಳಿಸಿದರು. ಜಸ್ಪ್ರೀತ್ ಬುಮ್ರಾ ಬದಲಿಗೆ ಆಡುವ 11ರ ಬಳಗ ಸೇರಿದ್ದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಗಾಯಗೊಂಡು ಮೈದಾನವನ್ನು ತೊರೆಯುವ ಮೊದಲು 2.2 ಓವರ್ಗಳಲ್ಲಿ ವಿಕೆಟ್ ಪಡೆಯದೆ 22 ರನ್ ನೀಡಿದರು.
ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಗಿರುವ ಮುಂಬೈ ತಂಡ ಆಡುವ 11ರ ಬಳಗದಲ್ಲಿ ಹಲವಾರು ಬದಲಾವಣೆ ಮಾಡಿತ್ತು. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ ಅರ್ಜುನ್ ತೆಂಡುಲ್ಕರ್ಗೆ ಮಣೆ ಹಾಕಿತು. ಗಾಯಗೊಂಡಿರುವ ತಿಲಕ್ ವರ್ಮಾ ಬದಲಿಗೆ ಡೇವಾಲ್ಡ್ ಬ್ರೆವಿಸ್ ಅವಕಾಶ ಪಡೆದರು. ಟಿಮ್ ಡೇವಿಡ್ ವಿಶ್ರಾಂತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಲಕ್ನೊ ಸೂಪರ್ ಜಯಂಟ್ಸ್: 20 ಓವರ್ಗಳಲ್ಲಿ 214/6
(ನಿಕೊಲಸ್ ಪೂರನ್ 75, ಕೆ.ಎಲ್.ರಾಹುಲ್ 55, ಮಾರ್ಕಸ್ ಸ್ಟೋಯಿನಿಸ್ 28, ಆಯುಷ್ ಬದೋನಿ ಔಟಾಗದೆ 22, ನುವಾನ್ ತುಷಾರ 3-28, ಪಿಯೂಷ್ ಚಾವ್ಲಾ 3-29)