ಡಾಕ್ಟರ್ ,ಇಂಜಿನಿಯರ್ ಆಗಬೇಕಿಲ್ಲ, ಕ್ರೀಡಾ ಜೀವನವೇ ಸುಂದರ: ಮನು ಭಾಕರ್
ಮನು ಭಾಕರ್ | PC : PTI
ಚೆನ್ನೈ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅವಳಿ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಶೂಟರ್ ಮನು ಭಾಕರ್ ದೇಶಾದ್ಯಂತ ಸುತ್ತಾಡುತ್ತಾ ಯುವ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
ಚೆನ್ನೈನ ವೇಲಮ್ಮಲ್ ನೆಕ್ಸಸ್ ಸ್ಕೂಲ್ಗೆ ಸೋಮವಾರ ಭೇಟಿ ನೀಡಿದ 22ರ ಹರೆಯದ ಭಾಕರ್ ತಾನು ಸಾಗಿ ಬಂದ ಪಯಣವನ್ನು ಹಂಚಿಕೊಂಡರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆರಂಭವಾದ ನನ್ನ ಪಯಣದಲ್ಲಿ ಮತ್ತೊಮ್ಮೆ ಆತ್ಮವಿಶ್ವಾಸ ಗಳಿಸಿಕೊಳ್ಳುವುದು ಕಷ್ಟಕರವಾಗಿತ್ತು. ನಾನು ಆಗ ವಿಶ್ವದ ನಂ.2ನೇ ಶೂಟರ್ ಆಗಿದ್ದೆ. ಆದರೆ ನಾನು ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಲಿಲ್ಲ. ನಾನು ಸೋಲು ಹಾಗೂ ಗೆಲುವಿನ ರುಚಿ ಎರಡನ್ನೂ ಅನುಭವಿಸಿದ್ದೇನೆ. ಇದು ಕ್ರೀಡೆಗಳ ಸೌಂದರ್ಯವಾಗಿದೆ. ಒಂದು ಸ್ಪರ್ಧಾವಳಿಯಲ್ಲಿ ಸೋತರೆ ಮತ್ತೊಂದು ಸ್ಪರ್ಧೆಯಲ್ಲಿ ಗೆಲ್ಲಬಹುದು. ನೀವು ಕಠಿಣ ಶ್ರಮಪಟ್ಟರೆ ಮಾತ್ರ ಇದು ಸಾಧ್ಯ ಎಂದು ಭಾಕರ್ ಹೇಳಿದ್ದಾರೆ.
ದೊಡ್ಡ ಕನಸು ಕಾಣಬೇಕೆಂದು ವಿದ್ಯಾರ್ಥಿಗಳಿಗೆ ವಿನಂತಿಸಿದ ಭಾಕರ್, ಗುರಿಯನ್ನು ಸಾಧಿಸಬೇಕಾದರೆ,ನಾವು ಸಾಕಷ್ಟು ಕಠಿಣ ಶ್ರಮ ಹಾಗೂ ಪ್ರಯತ್ನ ಪಡಬೇಕು. ನೀವು ದೊಡ್ಡ ಕನಸು ಕಂಡರೆ, ನೀವು ದೊಡ್ಡದ್ದನ್ನು ಸಾಧಿಸಬಹುದು. ಹೀಗಾಗಿ ಯಾವಾಗಲೂ ದೊಡ್ಡ ಕನಸನ್ನೇ ಕಾಣುವ ಮೂಲಕ ನಿಮ್ಮ ಪಯಣ ಆರಂಭಿಸಿ. ನಾನು ಯಾವುದೇ ಸ್ಪರ್ಧೆಯಲ್ಲಿ ಗೆದ್ದರೂ ಇಲ್ಲವೇ ಸೋತರೂ ಪರವಾಗಿಲ್ಲ. ನಾನು ಯಾವಾಗಲೂ ಆತ್ಮವಿಶ್ವಾಸದಿಂದ ಇರುತ್ತೇನೆ. ನಮ್ಮಗೆ ಹಲವಾರು ವೃತ್ತಿ ಆಯ್ಕೆಗಳಿವೆ. ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕಿಲ್ಲ. ಕ್ರೀಡಾ ಜೀವನ ಸುಂದರ ಜೀವನ. ಆರ್ಥಿಕ ಬೆಂಬಲ ಸಹಿತ ಕ್ರೀಡೆಯಲ್ಲಿ ಎಲ್ಲವನ್ನೂ ಪಡೆಯಬಹುದು ಎಂದು ಭಾಕರ್ ಹೇಳಿದ್ದಾರೆ.
ನಾನು ಶೂಟಿಂಗ್ ವೃತ್ತಿಜೀವನ ಆರಂಭಿಸಿ ಎಂಟೂವರೆ ವರ್ಷ ಕಳೆದಿದೆ. ನಾನು ಸುಮಾರು ಅರ್ಧ ಪ್ರಪಂಚವನ್ನು ಸುತ್ತಿದ್ದೇನೆ.ನಾನು ವಿವಿಧ ರೀತಿಯ ಜನರು ಹಾಗೂ ಸಂಸ್ಕೃತಿಗಳನ್ನು ನೋಡಿದ್ದೇನೆ. ಅವರ ಹಿನ್ನೆಲೆಗಳು ಹಾಗೂ ಹೋರಾಟಗಳನ್ನು, ಪ್ರಯಾಣಗಳನ್ನು ತಿಳಿದುಕೊಂಡಿದ್ದೇನೆ. ನಮ್ಮ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಎಂದಿಗೂ ನಾಚಿಕೆಪಡಬಾರದು ಎಂದು ಭಾಕರ್ ಹೇಳಿದ್ದಾರೆ.