ನನ್ನ ಕುಟುಂಬದ ಯಾರೊಬ್ಬರೂ WFI ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಬ್ರಿಜ್ ಭೂಷಣ್
ಹೊಸದಿಲ್ಲಿ, ಜು.31: ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಮುಂಬರುವ ಚುನಾವಣೆಗಳಲ್ಲಿ ನಮ್ಮ ಕುಟುಂಬದ ಯಾವೊಬ್ಬ ಸದಸ್ಯನು ಸ್ಪರ್ಧಿಸುವುದಿಲ್ಲ ಎಂದು ಭಾರತದ ಕುಸ್ತಿ ಒಕ್ಕೂಟದ(ಡಬ್ಲುಎಫ್‌ಐ)ನಿರ್ಗಮನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೋಮವಾರ ಹೇಳಿದ್ದಾರೆ.
25ರಲ್ಲಿ 22 ರಾಜ್ಯ ಘಟಕಗಳು ರವಿವಾರ ಕರೆದ ಸಭೆಯಲ್ಲಿ ಹಾಜರಾಗಿದ್ದವು. ಆಗಸ್ಟ್ 12ರಂದು ನಡೆಯುವ ಚುನಾವಣೆಯಲ್ಲಿ ವಿವಿಧ ಫೆಡರೇಶನ್‌ಗೆ ತನ್ನ ಅಭ್ಯರ್ಥಿಗಳನ್ನು ಸೋಮವಾರ ನೇಮಿಸಲಾಗುತ್ತದೆ ಎಂದು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಹೇಳಿದ್ದಾರೆ.
ಡಬ್ಲುಎಫ್‌ಐ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಬ್ರಿಜ್ ಭೂಷಣ್ ಹೊಸದಿಲ್ಲಿಯಲ್ಲಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. 22 ರಾಜ್ಯ ಸಂಸ್ಥೆಗಳ ಸದಸ್ಯರುಗಳು ಇಲ್ಲಿದ್ದಾರೆ. ಸಭೆಗೆ ಆಗಮಿಸಿದವರು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ತೆರಳಲಿದ್ದಾರೆ. ನನ್ನ ಕುಟುಂಬದ ಯಾರೊಬ್ಬರೂ ಇದರಲ್ಲಿಲ್ಲ. ಮೊದಲಿಗೆ ಚುನಾವಣೆ ನಡೆಯಲಿದೆ. ಗೆದ್ದವರು ತಮ್ಮ ಕೆಲಸ ಮಾಡಲಿದ್ದಾರೆ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
ಬ್ರಿಜ್‌ಭೂಷಣ್ ವಿರುದ್ಧ ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್, ಏಶ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಸಹಿತ ದೇಶದ ಪ್ರಮುಖ ಆರು ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ್ದರು. 12 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ರಾಷ್ಟ್ರೀಯ ಕ್ರೀಡಾ ಸಂಹಿತೆಯ ಅನ್ವಯ ಮತ್ತೆ ಸ್ಪರ್ಧಿಸಲು ಅನರ್ಹರಾಗಿದ್ದಾರೆ.
ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಕುಟುಂಬದ ಯಾರೊಬ್ಬರೂ ಕುಸ್ತಿ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಭರವಸೆ ನೀಡಿದ ಕಾರಣ ಬ್ರಿಜ್ ಭೂಷಣ್ ಪುತ್ರ ಕರಣ್ ಎಲೆಕ್ಟೋರಲ್ ಕಾಲೇಜ್‌ನಲ್ಲಿ ಇಲ್ಲ. ಬ್ರಿಜ್‌ಭೂಷಣ್‌ರ ಅಳಿಯ ವಿಶಾಲ್ ಸಿಂಗ್(ಬಿಹಾರ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ) ಡಬ್ಲುಎಫ್‌ಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಾರೆಂದು ಹೇಳಲಾಗುತ್ತಿತ್ತು. ಆದರೆ ಅವರು ಆಗಸ್ಟ್ 12ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.