ನಿವೃತ್ತಿ ಬಗ್ಗೆ ನಾನಿನ್ನೂ ಯೋಚಿಸಿಲ್ಲ, ಇನ್ನಷ್ಟು ಟ್ರೋಫಿಗಳನ್ನು ಗೆಲ್ಲುವ ಹಸಿವಿದೆ: ರೋಹಿತ್ ಶರ್ಮ
ರೋಹಿತ್ ಶರ್ಮ | PC : NDTV
ಮುಂಬೈ: ನಿವೃತ್ತಿ ಬಗ್ಗೆ ನಾನಿನ್ನೂ ಯೋಚಿಸಿಲ್ಲ, ಭಾರತಕ್ಕಾಗಿ ಇನ್ನಷ್ಟು ಜಾಗತಿಕ ಟ್ರೋಫಿಗಳನ್ನು ಗೆಲ್ಲುವ ಹಸಿವು ಈಗಲೂ ಇದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
“ಬ್ರೇಕ್ಫಾಸ್ಟ್ ವಿದ್ ಚಾಂಪಿಯನ್ಸ್’’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಹಿತ್, ಭಾರತಕ್ಕಾಗಿ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆಲ್ಲುವುದರತ್ತ ನಾನೀಗ ಗಮನ ಕೇಂದ್ರೀಕರಿಸಿದ್ದೇನೆ ಎಂದು ಹೇಳಿದರು.
“ನಾನು ನಿವೃತ್ತಿ ಬಗ್ಗೆ ಯೋಚಿಸಿಯೇ ಇಲ್ಲ. ಆದರೆ, ಬದುಕು ನಮ್ಮನ್ನು ಎಲ್ಲಿಗೆ ಒಯ್ಯುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಈಗ ನಾನು ಚೆನ್ನಾಗಿ ಆಡುತ್ತಿದ್ದೇನೆ. ಹಾಗಾಗಿ, ಇನ್ನೂ ಕೆಲವು ವರ್ಷಗಳ ಹೀಗೆ ಸಾಗುತ್ತದೆ ಎಂದು ನಾನು ಯೋಚಿಸಿದ್ದೇನೆ. ಬಳಿಕ, ನನಗೆ ಗೊತ್ತಿಲ್ಲ. ವಿಶ್ವಕಪ್ ಗೆಲ್ಲಲು ನಾನು ಬಯಸಿದ್ದೇನೆ. ಬಳಿಕ 2025ರಲ್ಲಿ ಡಬ್ಲ್ಯುಟಿಸಿ ಫೈನಲ್ ಇದೆ. ಭಾರತ ಅಲ್ಲಿಗೆ ಹೋಗುತ್ತದೆ ಎಂದು ನಾನು ಆಶಿಸಿದ್ದೇನೆ’’ ಎಂದರು.
2023ರಲ್ಲಿ ನಡೆದ ಏಕದಿನ ವಿಶ್ವಕಪ್ ಬಗ್ಗೆಯೂ ಅವರು ಮಾತನಾಡಿದರು. ಆ ಪಂದ್ಯಾವಳಿಯ ಫೈನಲ್ನಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿದೆ. ಪಂದ್ಯಾವಳಿಯುದ್ದಕ್ಕೂ ಅಜೇಯ ತಂಡವಾಗಿ ಸಾಗಿದ್ದ ಭಾರತವು ಫೈನಲ್ನಲ್ಲಿ ಮುಗ್ಗರಿಸಿತ್ತು.
“ನನಗೆ 50 ಓವರ್ ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ಆ ವಿಶ್ವಕಪ್ ನೋಡಿ ನಾವು ಬೆಳೆದವರು. ಅದೂ ಅಲ್ಲದೆ, ನಮ್ಮದೇ ಅಭಿಮಾನಿಗಳ ಸಮ್ಮುಖದಲ್ಲಿ ಭಾರತದಲ್ಲೇ ನಡೆದಿತ್ತು. ಫೈನಲ್ವರೆಗೂ ನಾವು ಚೆನ್ನಾಗಿ ಆಡಿದೆವು. ಸೆಮಿಫೈನಲ್ ಗೆದ್ದಾಗ, ಇನ್ನು ನಾವು ಒಂದೇ ಹೆಜ್ಜೆ ದೂರ ಎಂದು ನಾವು ಭಾವಿಸಿದ್ದೆವು. ನಾವು ಎಲ್ಲವನ್ನೂ ಸರಿಯಾಗಿಯೇ ಮಾಡಿದ್ದೆವು’’ ಎಂದು ಅವರು ಹೇಳಿದರು.
“ನಾವು ವಿಶ್ವಕಪ್ ಸೋಲುವಂತೆ ಮಾಡಬಲ್ಲ ಆ ಒಂದು ಅಂಶ ಯಾವುದು? ನಾವು ಸೋಲುವಂತೆ ಮಾಡಬಲ್ಲ ಒಂದು ಅಂಶವೂ ನನ್ನ ತಲೆಗೆ ಹೊಳೆಯಲಿಲ್ಲ. ನಾವು ಎಲ್ಲ ಅಂಶಗಳನ್ನೂ ಸರಿಯಾಗಿಯೇ ನಿಭಾಯಿಸಿದ್ದೆವು ಎಂದು ನಾವು ಭಾವಿಸಿದ್ದೆವು. ಯಾಕೆಂದರೆ ನಾವು ಉತ್ತಮ ಕ್ರಿಕೆಟ್ ಆಡಿದ್ದೆವು. ಆ ವಿಶ್ವಾಸ ಇತ್ತು’’ ಎಂದು ರೋಹಿತ್ ಶರ್ಮ ಹೇಳಿದರು.
“ನಮಗೆಲ್ಲರಿಗೂ ಒಂದು ಕೆಟ್ಟ ದಿನ ಇದ್ದೇ ಇರುತ್ತದೆ. ಅದು ನಮ್ಮ ಕೆಟ್ಟ ದಿನವಾಗಿತ್ತು ಎಂದು ನನಗೆ ಅನಿಸುತ್ತದೆ. ಆ ಫೈನಲ್ನಲ್ಲಿ ನಾವು ಕೆಟ್ಟ ಕ್ರಿಕೆಟ್ ಆಡಿದ್ದೇವೆ ಎಂದು ನನಗನಿಸುವುದಿಲ್ಲ. ಆದರೆ, ಆ ದಿನ ನಮ್ಮ ಪರವಾಗಿ ಏನೂ ನಡೆಯಲಿಲ್ಲ. ಆದರೆ ಆಸ್ಟ್ರೇಲಿಯ ನಮಗಿಂತ ಕೊಂಚ ಉತ್ತಮವಾಗಿತ್ತು’’ ಎಂದು ಅವರು ಹೇಳಿದರು.