ಗಂಭೀರ್ ವಿಮರ್ಶೆಗೆ ಚಾಂಪಿಯನ್ಸ್ ಟ್ರೋಫಿ ಅಲ್ಲ, ಇಂಗ್ಲೆಂಡ್ ಪ್ರವಾಸ ಸಕಾಲ: ಆಕಾಶ್ ಚೋಪ್ರಾ

ಆಕಾಶ್ ಚೋಪ್ರಾ | Photo: Instagram/ Aakash Chopra
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ, ಹಲವು ಕ್ರಿಕೆಟಿಗರಂತೆ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ನಿಕಟ ನಿಗಾದಲ್ಲಿದ್ದಾರೆ.
ಅವರು ಭಾರತೀಯ ಕ್ರಿಕೆಟ್ ತಂಡದ ಉಸ್ತುವಾರಿ ವಹಿಸಿದ ಬಳಿಕ ತಂಡವು ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಸೋತಿದೆ.ಬಳಿಕ ಸ್ವದೇಶದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ತೀವ್ರ ಹಿನ್ನಡೆ ಅನುಭವಿಸಿತು. ಅಂತಿಮವಾಗಿ, ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನೂ 3-1 ಅಂತರದಿಂದ ಕಳೆದುಕೊಂಡಿದೆ.
ಹಲವು ವರ್ಷಗಳ ಬಳಿಕ ಭಾರತೀಯ ಕ್ರಿಕೆಟ್ ತಂಡವು ಇಂಥ ಸರಣಿ ವೈಫಲ್ಯಗಳನ್ನು ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿ 2025ರ ಬಳಿಕ, ಗಂಭೀರ್ರ ಗುತ್ತಿಗೆಯನ್ನು ಬಿಸಿಸಿಐ ಮರುಪರಿಶೀಲಿಸುವ ಸಾಧ್ಯತೆಯಿದೆ ಎಂಬುದಾಗಿಯೂ ವರದಿಯೊಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕ್ರಿಕೆಟ್ ಅಭಿಮಾನಿಯೊಬ್ಬರು ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾರಿಗೆ ಕುತೂಹಲಕರ ಪ್ರಶ್ನೆಯೊಂದನ್ನು ಕೇಳಿದರು. ‘‘2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ನಿರ್ವಹಣೆ ಉತ್ತಮವಾಗಿರದಿದ್ದರೆ, ಗೌತಮ್ ಗಂಭೀರ್ರನ್ನು ವಜಾಗೊಳಿಸಲಾಗುವುದೇ?’’. ಅದಕ್ಕೆ ಉತ್ತರಿಸಿದ ಚೋಪ್ರಾ, ಗಂಭೀರ್ ಬಗ್ಗೆ ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಚಾಂಪಿಯನ್ಸ್ ಟ್ರೋಫಿ ತೀರಾ ಬೇಗವಾಯಿತು ಎಂದು ಹೇಳಿದರು.
‘‘ಈ ಬಾರಿ ನಡೆಯುತ್ತಿರುವುದು ಸಾಮಾನ್ಯ ಚಾಂಪಿಯನ್ಸ್ ಟ್ರೋಫಿ ಅಲ್ಲ. 2013ರ ಚಾಂಪಿಯನ್ಸ್ ಟ್ರೋಫಿ ಕೂಡ ಸಾಮಾನ್ಯವಾಗಿರಲಿಲ್ಲ. ಯಾಕೆಂದರೆ, ಅದು ಹೊಸ ಶಕೆಯೊಂದರ ಆರಂಭವಾಗಿತ್ತು. ಈ ಬಾರಿ, ಅದು ಪರಿವರ್ತನೆಯೊಂದರ ಕೊನೆಯಾಗಿದೆ. ಹಾಲಿ ಭಾರತೀಯ ತಂಡದ ಆಯ್ಕೆ ಸರಿಯಾಗಿಲ್ಲ ಎಂದು ನನಗೆ ಅನಿಸುತ್ತದೆ. ಹಾಗಾಗಿ, ಭಾರತೀಯ ಕ್ರಿಕೆಟ್ನಲ್ಲಿ ತಳಮಳವನ್ನು ನಾವು ನೋಡುತ್ತೇವೆ. ಗೌತಮ್ ಗಂಭೀರ್ರನ್ನು ವಜಾಗೊಳಿಸಲಾಗುವುದೇ? ಆದರೆ, ಇಂಗ್ಲೆಂಡ್ ಪ್ರವಾಸದವರೆಗೆ ಕಾಯಲಾಗುತ್ತದೆ ಎಂದು ನನಗೆ ಅನಿಸುತ್ತದೆ. ಅಲ್ಲಿವರೆಗೆ ಅವರಿಗೆ ಬಿಸಿಸಿಐ ಏನೂ ಹೇಳುವುದಿಲ್ಲ ಎಂದು ನನಗೆ ಅನಿಸುತ್ತದೆ. ಇಂಗ್ಲೆಂಡ್ ಪ್ರವಾಸ ಮುಗಿಯವಾಗ, ಅವರು ಕೋಚ್ ಹುದ್ದೆಯನ್ನು ವಹಿಸಿಕೊಂಡು ಒಂದು ವರ್ಷವಾಗುತ್ತದೆ. ಒಬ್ಬ ಕೋಚ್ ಒಂದು ವರ್ಷದಲ್ಲಿ ಪರಿವರ್ತನೆಯನ್ನು ತರಬೇಕೆಂದು ನಿರೀಕ್ಷಿಸಲಾಗುತ್ತದೆ. ಹಾಗಾಗಿ, ಅವರ ನಿರ್ವಹಣೆ ಹೇಗಿತ್ತು? ಯಾವ ಆಟಗಾರನನ್ನು ಅವರು ತಯಾರು ಮಾಡಿದರು? ತಂಡದ ನಿರ್ವಹಣೆ ಸುಧಾರಿಸಿದೆಯೇ? ಎಂಬ ವಿಮರ್ಶೆಯನ್ನು ಆಗ ಮಾಡಬಹುದಾಗಿದೆ’’ ಎಂಬುದಾಗಿ ಆಕಾಶ್ ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.