ರಾಷ್ಟ್ರೀಯ ತಂಡದಲ್ಲಿ ನನ್ನ ಭವಿಷ್ಯದ ಕುರಿತು ಯೋಚಿಸುತ್ತಿಲ್ಲ: ಪೃಥ್ವಿ ಶಾ
Photo: Twitter@BCCI
ಲಂಡನ್: ಸದ್ಯ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ಬುಧವಾರ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ತಾನು ರಾಷ್ಟ್ರೀಯ ತಂಡದ ಭವಿಷ್ಯದ ಕುರಿತಾಗಿ ಸದ್ಯ ಯೋಚಿಸುತ್ತಿಲ್ಲ. ಕೌಂಟಿ ಕ್ರಿಕೆಟ್ನ ಅವಧಿಯನ್ನು ಆನಂದಿಸಲು ಬಯಸಿದ್ದೇನೆ ಎಂದು ಶಾ ಹೇಳಿದ್ದಾರೆ.
ಇಂಗ್ಲೆಂಡ್ನ ಏಕದಿನ ಕಪ್ ಟೂರ್ನಮೆಂಟ್ನಲ್ಲಿ ಸೊಮರ್ಸೆಟ್ ವಿರುದ್ಧ 153 ಎಸೆತಗಳಲ್ಲಿ 244 ರನ್ ಗಳಿಸಿದ್ದ ಪೃಥ್ವಿ ಶಾ ನಾಟಿಂಗ್ಹ್ಯಾಮ್ಶೈರ್ 87 ರನ್ನಿಂದ ಗೆಲುವು ಸಾಧಿಸಲು ನೆರವಾಗಿದ್ದರು. 23ರ ಹರೆಯದ ಪ್ರತಿಭಾವಂತ ಬ್ಯಾಟರ್ ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ದೂರವುಳಿದಿದ್ದಾರೆ. 2021ರ ಜುಲೈನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು.
ಶಾ ಅವರನ್ನು ಈಗ ನಡೆಯುತ್ತಿರುವ ವೆಸ್ಟ್ಇಂಡೀಸ್ ಸರಣಿಯಿಂದಲೂ ಹೊರಗಿಡಲಾಗಿತ್ತು. ಮುಂಬರುವ ಐರ್ಲ್ಯಾಂಡ್ಸ್ ವಿರುದ್ದ ಸರಣಿಗಾಗಿ ಆಯ್ಕೆ ಮಾಡಲಾಗಿರುವ 2ನೇ ದರ್ಜೆಯ ಭಾರತದ ಟಿ-20 ತಂಡ ಹಾಗೂ ಏಶ್ಯನ್ ಗೇಮ್ಸ್ನಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ.
ನಾನು ಇಲ್ಲಿಗೆ ಅನುಭವ ಪಡೆಯಲು ಬಂದಿರುವೆ. ಭಾರತದ ಆಯ್ಕೆಗಾರರು ಏನು ಯೋಚಿಸುತ್ತಿದ್ದಾರೆಂಬ ಕುರಿತು ನಾನು ಚಿಂತಿಸುತ್ತಿಲ್ಲ. ನಾನಿಲ್ಲಿ ಉತ್ತಮ ಸಮಯಕ್ಕಾಗಿ ಬಂದಿರುವೆ. ನಾಟಿಂಗ್ಹ್ಯಾಮ್ಶೈರ್ ನನಗೆ ಈ ಉತ್ತಮ ಅವಕಾಶ ನೀಡಿದೆ. ನಾನು ಇಲ್ಲಿ ಕ್ರಿಕೆಟ್ನ್ನು ಆನಂದಿಸುತ್ತಿರುವೆ ಎಂದು ಶಾ ಹೇಳಿದ್ದಾರೆ.
ಚೊಚ್ಚಲ ಕೌಂಟಿ ಋತುವನ್ನು ಆಡಿದ ಶಾ ಬುಧವಾರ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದು 153 ಎಸೆತಗಳಲ್ಲಿ 28 ಬೌಂಡರಿ ಹಾಗೂ 11 ಸಿಕ್ಸರ್ಗಳ ಸಹಿತ ಒಟ್ಟು 244 ರನ್ ಗಳಿಸಿದರು. ಲಿಸ್ಟ್ ಎ ಕ್ರಿಕೆಟ್ನಲ್ಲಿ ಎರಡನೇ ಬಾರಿ ದ್ವಿಶತಕ ಸಿಡಿಸಿದರು.