ನೊವಾಕ್ ಜೊಕೊವಿಕ್, ಕೊಕೊ ಗೌಫ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ನೊವಾಕ್ ಜೊಕೊವಿಕ್, ಕೊಕೊ ಗೌಫ್ Photo: twitter/@usopen
ನ್ಯೂಯಾರ್ಕ್: ಸರ್ಬಿಯದ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ 13ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಅವರು ಕರೋಲಿನ್ ವೋಝ್ನಿಯಾಕಿ ಅವರ ಮರಳಿ ಹೋರಾಡುವ ಕನಸನ್ನು ಭಗ್ನಗೊಳಿಸಿದರು.
ಮೂರು ಬಾರಿ ಯು.ಎಸ್. ಓಪನ್ ಚಾಂಪಿಯನ್ ಆಗಿರುವ ಜೊಕೊವಿಕ್ ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕ್ರೊಯೇಶಿಯದ ಕ್ವಾಲಿಫೈಯರ್ ಬೊರ್ನಾ ಗೊಜೊರನ್ನು 6-2, 7-5, 6-4 ಸೆಟ್ಗಳ ಅಂತರದಿಂದ ಸೋಲಿಸಿದರು. ಮಂಗಳವಾರ ನಡೆಯುವ ಅಂತಿಮ-8ರ ಸುತ್ತಿನಲ್ಲಿ ಅಮೆರಿಕದ ನಂ.1 ಆಟಗಾರ ಟೇಲರ್ ಫ್ರಿಟ್ಝ್ರನ್ನು ಎದುರಿಸಲಿದ್ದಾರೆ.
36ರ ಹರೆಯದ ಜೊಕೊವಿಕ್ ಮಂಗಳವಾರ ಫ್ರಿಟ್ಜ್ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ತಿಂಗಳು ನಡೆದ ಸಿನ್ಸಿನಾಟಿ ಮಾಸ್ಟರ್ಸ್ ಸಹಿತ ಹಿಂದಿನ 7 ಪಂದ್ಯಗಳಲ್ಲಿ ಜೊಕೊವಿಕ್ ಅವರು ಫ್ರಿಟ್ಜ್ ವಿರುದ್ಧ ಜಯ ಸಾಧಿಸಿದ್ದರು.
ಸ್ವಿಸ್ ಕ್ವಾಲಿಫೈಯರ್ ಡೊಮಿನಿಕ್ ಸ್ಟ್ರೈಕರ್ ವಿರುದ್ಧ 7-6(7/2), 6-4, 6-4 ಸೆಟ್ಗಳ ಅಂತರದಿಂದ ಜಯ ಸಾಧಿಸಿರುವ ಫ್ರಿಟ್ಝ್ ಕ್ವಾರ್ಟರ್ ಫೈನಲ್ ತಲುಪಿದ ಅಮೆರಿಕದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
ಫ್ರಾನ್ಸಿಸ್ ಟಿಫಾಯ್ ಹಾಗೂ ಬೆನ್ ಶೆಲ್ಟನ್ರೊಂದಿಗೆ ಫ್ರಿಟ್ಝ್ ಸೇರಿಕೊಂಡರು. 2005ರ ನಂತರ ನ್ಯೂಯಾರ್ಕ್ನಲ್ಲಿ ಮೂವರು ಪುರುಷ ಆಟಗಾರರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಟಿಫಾಯ್ ಆಸ್ಟ್ರೇಲಿಯದ ರಿಂಕಿ ಹಿಜಿಕಾಟಾರನ್ನು 6-4, 6-1, 6-4 ಸೆಟ್ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದು, ಮುಂದಿನ ಸುತ್ತಿನಲ್ಲಿ 47ನೇ ರ್ಯಾಂಕಿನ ತಮ್ಮದೇ ದೇಶದ ಶೆಲ್ಟನ್ರನ್ನು ಎದುರಿಸಲಿದ್ದಾರೆ.
25ರ ಹರೆಯದ ಟಿಫಾಯ್ ಕಳೆದ ವರ್ಷ ಯು.ಎಸ್. ಓಪನ್ನಲ್ಲಿ ಸೆಮಿ ಫೈನಲ್ ತಲುಪಿದ್ದರು. ಆಗ ಚಾಂಪಿಯನ್ ಪಟ್ಟಕ್ಕೇರಿದ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಐದು ಸೆಟ್ಗಳ ಅಂತರದಿಂದ ಸೋತಿದ್ದರು.
ಇದೇ ವೇಳೆ 20ರ ವಯಸ್ಸಿನ ಶೆಲ್ಟನ್ ಸಹ ಆಟಗಾರ 14ನೇ ಶ್ರೇಯಾಂಕದ ಟಾಮಿ ಪೌಲ್ರನ್ನು 4 ಸೆಟ್ಗಳ ಅಂತರದಿಂದ ಮಣಿಸಿ ಈ ವರ್ಷದ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 2ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆ್ಯಂಡಿ ರೊಡಿಕ್(2002)ನಂತರ ಯು.ಎಸ್. ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಅಮೆರಿಕದ ಯುವ ಆಟಗಾರ ಎನಿಸಿಕೊಂಡರು.
ಗೌಫ್ ಅಂತಿಮ-8ಕ್ಕೆ ಪ್ರವೇಶ: ಆರನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಗೌಫ್ ವಿಶ್ವದ ಮಾಜಿ ನಂ.1 ಆಟಗಾರ್ತಿ ವೋಝ್ನಿಯಾಕಿ ಅವರನ್ನು 6-3, 3-6, 6-1 ಸೆಟ್ಗಳ ಅಂತರದಿಂದ ಸೋಲಿಸಿ ಅಂತಿಮ-8ರ ಸುತ್ತು ತಲುಪಿದರು.