ಆಸ್ಟ್ರೇಲಿಯನ್ ಓಪನ್ 2024: ಜೊಕೊವಿಕ್, ಸ್ವಿಯಾಟೆಕ್ಗೆ ಅಗ್ರ ಶ್ರೇಯಾಂಕ
ಜೊಕೊವಿಕ್(PTI)
ಮೆಲ್ಬರ್ನ್: ಈ ವರ್ಷದ ಆಸ್ಟ್ರೇಲಿಯನ್ ಓಪನ್ನಲ್ಲಿ ನೊವಾಕ್ ಜೊಕೊವಿಕ್ ಹಾಗೂ ಇಗಾ ಸ್ವಿಯಾಟೆಕ್ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ ಎಂದು ಟೂರ್ನಮೆಂಟ್ನ ಆಯೋಜಕರು ಬುಧವಾರ ಧೃಢಪಡಿಸಿದ್ದಾರೆ.
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಜನವರಿ 14ರಿಂದ 28ರ ತನಕ ನಡೆಯಲಿದೆ.
ವಿಶ್ವದ ನಂ.1 ಹಾಗೂ 10 ಬಾರಿಯ ಚಾಂಪಿಯನ್ ಜೊಕೊವಿಕ್ ಪುರುಷರ ತಂಡದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದು, ಮೆಲ್ಬರ್ನ್ನಲ್ಲಿ ಅಗ್ರ ಶ್ರೇಯಾಂಕದಲ್ಲಿ 42-0 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ.
ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದ ಕಾರ್ಲೊಸ್ ಅಲ್ಕರಾಝ್ ಈ ಬಾರಿ 2ನೇ ಶ್ರೇಯಾಂಕ ಪಡೆದಿದ್ದಾರೆ. ರಶ್ಯದ ಡ್ಯಾನಿಲ್ ಮೆಡ್ವೆಡೆವ್, ಇಟಲಿಯ ಜನ್ನಿಕ್ ಸಿನ್ನೆರ್ ಕ್ರಮವಾಗಿ 3ನೇ ಹಾಗೂ 4ನೇ ಶ್ರೇಯಾಂಕ ಪಡೆದಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಹಾಲಿ ಚಾಂಪಿಯನ್ ಅರ್ಯನಾ ಸಬಲೆಂಕಾ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್ ನಂತರ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಕಳೆದ ವರ್ಷದ ರನ್ನರ್ಸ್ ಅಪ್ ಎಲೆನಾ ರೈಬಾಕಿನಾ ಹಾಗೂ ಹಾಲಿ ಯು.ಎಸ್. ಓಪನ್ ಚಾಂಪಿಯನ್ ಕೊಕೊ ಗೌಫ್ ಕ್ರಮವಾಗಿ 3ನೇ ಹಾಗೂ 4ನೇ ಶ್ರೇಯಾಂಕ ಪಡೆದಿದ್ದಾರೆ.