ಏಕದಿನ ಕ್ರಿಕೆಟ್ ರ್ಯಾಂಕಿಂಗ್: ಭಾರತದ ಶುಭಮನ್ ಗಿಲ್, ಸಿರಾಜ್ಗೆ ಅಗ್ರ ಸ್ಥಾನ
ಮುಹಮ್ಮದ್ ಸಿರಾಜ್(Photo :x/@LoyalSachinFan) ಶುಭಮನ್ ಗಿಲ್(Photo : x/@JaiswalRoot)
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಹಾಗೂ ವೇಗಿ ಮುಹಮ್ಮದ್ ಸಿರಾಜ್ ಅವರು ಏಕದಿನ ಮಾದರಿಯ ಬ್ಯಾಟರ್ ಹಾಗೂ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಬುಧವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯ ಪ್ರಕಾರ ಶುಭಮನ್ ಗಿಲ್ ಅವರು 830 ಪಾಯಿಂಟ್ಸ್ ಹಾಗೂ ಸಿರಾಜ್ 709 ಅಂಕ ಗಳಿಸಿದ್ದಾರೆ.
ಗಿಲ್ ಸಾಧನೆ: ಈಗ ನಡೆಯುತ್ತಿರುವ ವಿಶ್ವಕಪ್ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಶುಭಮನ್ ಗಿಲ್ ಪಾಕಿಸ್ತಾನದ ಬಾಬರ್ ಆಝಮ್ರನ್ನು ಹಿಂದಿಕ್ಕಿ ನಂ.1 ಏಕದಿನ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್ನಲ್ಲಿ ಭಾರತಕ್ಕೆ ಬಿರುಸಿನ ಆರಂಭ ನೀಡುತ್ತಿರುವ ಗಿಲ್ ನಂ.1 ಸ್ಥಾನಕ್ಕೇರಿದ ಭಾರತದ 4ನೇ ಆಟಗಾರನಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಲೆಜೆಂಡ್ಗಳಾದ ಸಚಿನ್ ತೆಂಡುಲ್ಕರ್, ಎಂ.ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡರು.
ಈ ವರ್ಷ ಏಕದಿನ ಮಾದರಿ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿರುವ ಗಿಲ್ ಒಟ್ಟಾರೆ 41 ಇನಿಂಗ್ಸ್ಗಳಲ್ಲಷ್ಟೇ ಬ್ಯಾಟ್ ಬೀಸಿದ್ದಾರೆ. ಆ ಮೂಲಕ ವೇಗವಾಗಿ ನಂ.1 ಸ್ಥಾನಕ್ಕೇರಿದ 2ನೇ ಬ್ಯಾಟರ್ ಆಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 38 ಇನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದರು.
ಈ ವರ್ಷ 26 ಇನಿಂಗ್ಸ್ಗಳಲ್ಲಿ ಆಡಿರುವ ಗಿಲ್ ಒಂದು ದ್ವಿಶತಕ, 5 ಶತಕ ಹಾಗೂ 7 ಅರ್ಧಶತಕಗಳ ಸಹಿತ 1,449 ರನ್ ಗಳಿಸಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಬಲಗೈ ಬ್ಯಾಟರ್ ಗಿಲ್ ಆರು ಇನಿಂಗ್ಸ್ಗಳಲ್ಲಿ ಒಟ್ಟು 219 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ 92 ರನ್ ಗಳಿಸಿದ್ದರು.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಷ್ಟೇನು ಪರಿಣಾಮಕಾರಿ ಎನಿಸದ, ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ನಂ.1 ಸ್ಥಾನದಲ್ಲಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ (824 ರನ್)2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಬರ್ ಆಡಿರುವ 8 ಪಂದ್ಯಗಳಲ್ಲಿ 282 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್(8 ಇನಿಂಗ್ಸ್, 550 ರನ್) ಹಾಗೂ ಭಾರತದ ವಿರಾಟ್ ಕೊಹ್ಲಿ(8 ಇನಿಂಗ್ಸ್, 550 ರನ್)ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ವಿಂಟನ್ 771 ಹಾಗೂ ಕೊಹ್ಲಿ 770 ಅಂಕ ಗಳಿಸಿದ್ದಾರೆ. ಕೊಹ್ಲಿ ಮೂರು ಸ್ಥಾನ ಭಡ್ತಿ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(743) ಹಾಗು ಭಾರತ ತಂಡದ ನಾಯಕ ರೋಹಿತ್ ಶರ್ಮಾ(739)ಪಟ್ಟಿಯಲ್ಲಿ 5 ಹಾಗೂ 6ನೇ ಸ್ಥಾನದಲ್ಲಿದ್ದಾರೆ.
ಮತ್ತೆ ಮೇಲೇರಿದ ಸಿರಾಜ್: ಈ ವರ್ಷ ಆಡಿರುವ 21 ಇನಿಂಗ್ಸ್ಗಳಲ್ಲಿ 40 ವಿಕೆಟ್ಗಳನ್ನು ಕಬಳಿಸಿರುವ ಸಿರಾಜ್ ಮತ್ತೊಮ್ಮೆ ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೆ ಮರಳಿದ್ದಾರೆ.
2023ರ ಆರಂಭದಲ್ಲಿ ಮೊದಲ ಬಾರಿ ಅಗ್ರಸ್ಥಾನ ತಲುಪಿದ್ದ ಸಿರಾಜ್ ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿಗೆ ಮೊದಲು ನಂ.1 ಸ್ಥಾನದಲ್ಲಿ ಕಾಣಿಸಿಕೊಂಡು ಕೆಳಗಿಳಿದಿದ್ದರು. ಟೂರ್ನಿಯಲ್ಲಿ ನಿಧಾನವಾಗಿ ಲಯ ಕಂಡುಕೊಳ್ಳುತ್ತಿರುವ ಅವರು ಮತ್ತೆ ನಂ.1 ಬೌಲರ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್(694), ಆಸ್ಟ್ರೇಲಿಯದ ಆಡಮ್ ಝಾಂಪಾ(662), ಭಾರತದ ಕುಲದೀಪ್ ಯಾದವ್(661) ಹಾಗೂ ಪಾಕಿಸ್ತಾನದ ಶಾಹೀನ್ ಅಫ್ರಿದಿ(658)ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್(327), ಅಫ್ಘಾನಿಸ್ತಾನದ ಮುಹಮ್ಮದ್ ನಬಿ(290) ಹಾಗೂ ಝಿಂಬಾಬ್ವೆಯ ಸಿಕಂದರ್ ರಝಾ(287) ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೊದಲ 3 ಸ್ಥಾನಗಳಲ್ಲಿದ್ದಾರೆ.