ಏಕದಿನ ವಿಶ್ವಕಪ್: ಇಬ್ಬನಿಯ ಕಾಟ, ಟಾಸ್ ಪ್ರಭಾವ ತಪ್ಪಿಸಲು ಐಸಿಸಿ ತಂತ್ರ
Photo- PTI
ಹೊಸದಿಲ್ಲಿ : ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಇಬ್ಬನಿಯು ಪ್ರಮುಖ ಪಾತ್ರವಹಿಸಲಿದ್ದು, ಇಬ್ಬನಿಯ ಕಾಟ, ಟಾಸ್ನ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದನ್ನು ಖಚಿತಪಡಿಸಲು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಎಲ್ಲ ಸ್ಟೇಡಿಯಮ್ಗಳ ಕ್ಯುರೇಟರ್ಗಳಿಗೆ ಶಿಷ್ಟಾಚಾರವನ್ನು ರೂಪಿಸಿದೆ.
ಅಕ್ಟೋಬರ್-ನವೆಂಬರ್ನಲ್ಲಿ ಹೆಚ್ಚಿನ ಕ್ರೀಡಾಂಗಣಗಳು ಭಾರೀ ಇಬ್ಬನಿ ಕಾಟ ಎದುರಿಸುವ ನಿರೀಕ್ಷೆ ಇದೆ. 2021ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಕೂಡ ಇಬ್ಬನಿಯಿಂದ ಭಾರೀ ಸಮಸ್ಯೆಗೆ ಒಳಗಾಗಿತ್ತು. ಎರಡನೇ ಬ್ಯಾಟಿಂಗ್ ಮಾಡಿದ್ದ ತಂಡ ಹೆಚ್ಚು ಲಾಭ ಪಡೆದಿತ್ತು.
ಪಿಚ್ನಲ್ಲಿ ಹುಲ್ಲು ಇರುವಂತೆ ನೋಡಿಕೊಳ್ಳಲು ಸೂಚನೆ
ಭಾರತದ ವಾತಾವರಣವು ಸಾಮಾನ್ಯವಾಗಿ ಸ್ಪಿನ್ಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆದರೆ ವೇಗಿಗಳು ಸ್ಪರ್ಧೆಯಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಪಿಚ್ಗಳಲ್ಲಿ ಸಾಧ್ಯವಾದಷ್ಟು ಹುಲ್ಲು ಇರುವಂತೆ ನೋಡಿಕೊಳ್ಳಲು ಕ್ಯುರೇಟರ್ಗಳಿಗೆ ಐಸಿಸಿ ಸೂಚಿಸಿದೆ. ಹೀಗಾಗಿ ತಂಡಗಳು ಆಡುವ 11ರ ಬಳಗದಲ್ಲಿ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಉತ್ಸುಕವಾಗಲಿವೆ.
ಭಾರತದ ಉತ್ತರ, ಪಶ್ಚಿಮ ಹಾಗೂ ಪೂರ್ವ ರಾಜ್ಯಗಳ ಸ್ಟೇಡಿಯಮ್ಗಳಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ಭಾರೀ ಇಬ್ಬನಿ ಕಂಡುಬರುವ ಸಾಧ್ಯತೆಯಿದೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಬ್ಬನಿ ಸ್ಪಿನ್ನರ್ಗಳ ಪ್ರದರ್ಶನದ ಮೇಲೆ ಹೆಚ್ಚಾಗಿ ಪರಿಣಾಬೀರುತ್ತದೆ. ಪಿಚ್ನಲ್ಲಿ ಹೆಚ್ಚು ಹುಲ್ಲು ಇದ್ದರೆ ತಂಡಗಳು ಸ್ಪಿನ್ನರ್ಗಳನ್ನು ಹೆಚ್ಚು ಅವಲಂಬಿಸುವುದಿಲ್ಲ ಎಂದು ಮೂಲವೊಂದು ತಿಳಿಸಿದೆ.
ಬೌಂಡರಿ ಗಾತ್ರ 70 ಮೀಟರ್ಗಿಂತ ಹೆಚ್ಚು ಇರಲು ಸೂಚನೆ
ಅಂತರ್ರಾಷ್ಟ್ರೀಯ ಪಂದ್ಯಗಳ ಬೌಂಡರಿಗಳ ಕನಿಷ್ಠ ಗಾತ್ರ 65 ಮೀಟರ್ ಹಾಗೂ ಗರಿಷ್ಠ 85 ಮೀಟರ್. ಹಳೆಯ ಸ್ಟೇಡಿಯಮ್ಗಳು ಸುಮಾರು 70-75 ಮೀಟರ್ಗಳ ಬೌಂಡರಿ ಗಾತ್ರ ಹೊಂದಿವೆ. 70 ಮೀಟರ್ಗಳಿಗಿಂತ ಹೆಚ್ಚು ಬೌಂಡರಿಗಳನ್ನು ಇಡಬೇಕೆಂದು ಸೂಚಿಸಲಾಗಿದೆ. ಕ್ರಿಕೆಟ್ ಮಂಡಳಿ ಹಾಗೂ ಐಸಿಸಿಯಿಂದ ಪ್ರಮಾಣೀಕರಿಸಲ್ಪಟ್ಟ ವೆಟ್ಟಿಂಗ್ ಏಜೆಂಟ್ ಅನ್ನು ಬಳಸಲು ಕ್ಯುರೇಟರ್ಗಳಿಗೆ ಬಿಸಿಸಿಐ ನಿರ್ದೇಶನ ನೀಡಿದೆ. ಇತ್ತೀಚೆಗೆ ಹೆಚ್ಚಿನ ಸ್ಟೇಡಿಯಮ್ಗಳು ಇದೇ ರೀತಿ ವೆಟ್ಟಿಂಗ್ ಏಜೆಂಟ್ಗಳನ್ನು ಬಳಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧ ತಿರುವು ನೀಡುವ ಪಿಚ್ಗಳಲ್ಲಿ ಆಡಲು ಆದ್ಯತೆ ನೀಡುತ್ತದೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯವು ಚೆನ್ನೈನಲ್ಲಿ ಅ.8ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಇಬ್ಬನಿ ಕಾಡುವ ಸಾಧ್ಯತೆ ಇಲ್ಲ. ಅಕ್ಟೋಬರ್ 29ರಂದು ಲಕ್ನೊದಲ್ಲಿ ನಿಗದಿಯಾಗಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯವು ಕ್ಯುರೇಟರ್ಗಳಿಗೆ ಸವಾಲಾಗಿದೆ.