ಏಕದಿನ ವಿಶ್ವಕಪ್: ಸೆಮಿ ಫೈನಲ್ ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗುವುದೇ?
ನಾಲ್ಕನೇ ಸ್ಥಾನಕ್ಕೆ 3 ತಂಡಗಳಿಂದ ಪೈಪೋಟಿ
Photo: twitter.com/nitin_gadkari
ಹೊಸದಿಲ್ಲಿ: ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಅಂತರದ ಭರ್ಜರಿ ಜಯ ಸಾಧಿಸಿರುವ ಭಾರತ ಈಗ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ದ.ಆಫ್ರಿಕಾವನ್ನು ಸದೆಬಡಿದ ಭಾರತ ಟೂರ್ನಿಯಲ್ಲಿ ಸತತ 8ನೇ ಗೆಲುವು ದಾಖಲಿಸಿದೆ.
ದಕ್ಷಿಣ ಆಫ್ರಿಕಾ(8 ಪಂದ್ಯ, 12 ಅಂಕ)ಈಗಾಗಲೇ ಸೆಮಿ ಫೈನಲ್ ಗೆ ತೇರ್ಗಡೆಯಾಗಿದೆ. ಆಸ್ಟ್ರೇಲಿಯ(7 ಪಂದ್ಯ, 10 ಅಂಕ) 2ನೇ ಅಥವಾ 3ನೇ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಆಸ್ಟ್ರೇಲಿಯ ಇನ್ನಷ್ಟೇ ಸೆಮಿ ಫೈನಲ್ ಸ್ಥಾನ ಖಚಿತಪಡಿಸಬೇಕಾಗಿದೆ. ಆದರೆ ಅದಕ್ಕೆ ಇನ್ನು ಎರಡು ಪಂದ್ಯ ಆಡಲು ಬಾಕಿ ಇದೆ. ಆಸೀಸ್ ತಂಡವು ಮಂಗಳವಾರದಂದು ಅಫ್ಘಾನಿಸ್ತಾನ ಹಾಗೂ ಶನಿವಾರದಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿನ ಗೆಲುವು ಆಸ್ಟ್ರೇಲಿಯಕ್ಕೆ ಲೀಗ್ ಹಂತದಲ್ಲಿ ಅಗ್ರ-3ನೇ ಸ್ಥಾನ ಖಚಿತಪಡಿಸಬಹುದು.
ಅಗ್ರ-4ರಲ್ಲಿ ನಾಲ್ಕನೇ ಹಾಗೂ ಕೊನೆಯ ಸ್ಥಾನಕ್ಕಾಗಿ ಸದ್ಯ ಮೂರು ತಂಡಗಳಾದ ನ್ಯೂಝಿಲ್ಯಾಂಡ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಬಿರುಸಿನ ಸ್ಪರ್ಧೆ ಇದೆ. ಶ್ರೀಲಂಕಾ ಹಾಗೂ ನೆದರ್ಲ್ಯಾಂಡ್ಸ್ ಗೆ ಟಾಪ್-4ರಲ್ಲಿ ಸ್ಥಾನ ಪಡೆಯುವ ಅಲ್ಪ ಅವಕಾಶವಿದೆ.
ಲೀಗ್ ಹಂತದಲ್ಲಿ 4ನೇ ಸ್ಥಾನ ಪಡೆಯುವ ತಂಡವು ಸೆಮಿ ಫೈನಲ್ ಸುತ್ತಿನಲ್ಲಿ ಭಾರತವನ್ನು ಎದುರಿಸಲಿದೆ. ಮೆಗಾ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನವು ಮತ್ತೊಮ್ಮೆ ಸೆಣಸಾಡುವ ಸಾಧ್ಯತೆಯೂ ಇದೆ. ಪಾಕಿಸ್ತಾನವು ಸೆಮಿ ಫೈನಲ್ಗೆ ಅರ್ಹತೆ ಪಡೆಯುವ ಕೆಲವು ಸನ್ನಿವೇಶಗಳಿವೆ.
ಸನ್ನಿವೇಶ 1 : ನ್ಯೂಝಿಲ್ಯಾಂಡ್ ನ.9ರಂದು ಶ್ರೀಲಂಕಾ ವಿರುದ್ಧ ತನ್ನ ಕೊನೆಯ ರೌಂಡ್ ರಾಬಿನ್ ಅಭಿಯಾನ ಅಂತ್ಯಗೊಳಿಸಿದ ನಂತರ ನ.11ರಂದು ಪಾಕಿಸ್ತಾನವು ತನ್ನ ಕೊನೆಯ ಲೀಗ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾ ವಿರುದ್ಧ ಸೋತರೆ, ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದರೆ ಪಾಕ್ ತಂಡ ಕಿವೀಸ್ (8 ಅಂಕ) ಅನ್ನು ಹಿಂದಿಕ್ಕಿ 10 ಅಂಕ ಗಳಿಸಲಿದೆ. ಅಫ್ಘಾನಿಸ್ತಾನ 10 ಅಂಕ ಗಳಿಸುವುದನ್ನು ತಡೆಯಲು ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅಫ್ಘಾನ್ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿ ಪಾಕಿಸ್ತಾನವಿದೆ. ಒಂದು ವೇಳೆ ಅಫ್ಘಾನಿಸ್ತಾನವು ಉಳಿದಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಲಾ 10 ಅಂಕ ಪಡೆಯುತ್ತವೆ. ಆಗ ಸೆಮಿ ಫೈನಲ್ ಸ್ಥಾನವನ್ನು ನೆಟ್ ರನ್ರೇಟ್ ಮೂಲಕ ನಿರ್ಧರಿಸಲಾಗುತ್ತದೆ. ಅಸಾಧ್ಯದ ಸನ್ನಿವೇಶದಲ್ಲಿ ಅಫ್ಘಾನಿಸ್ತಾನವು ಆಸ್ಟ್ರೇಲಿಯ ಹಾಗೂ ದ.ಆಫ್ರಿಕಾ ಎರಡೂ ತಂಡವನ್ನು ಸೋಲಿಸಿದರೆ 12 ಅಂಕ ಗಳಿಸಿ ಸೆಮಿ ಫೈನಲ್ನಲ್ಲಿ ಸ್ಥಾನ ಪಡೆಯುತ್ತದೆ.
ಸನ್ನಿವೇಶ 2 : ಒಂದು ವೇಳೆ ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾವನ್ನು ಹಾಗೂ ಪಾಕಿಸ್ತಾನ ತಂಡ ಇಂಗ್ಲೆಂಡ್ನ್ನು ಸೋಲಿಸಿದರೆ, ಅಫ್ಘಾನಿಸ್ತಾನ ಎರಡೂ ಪಂದ್ಯಗಳಲ್ಲಿ ಸೋಲುಂಡರೆ, ನಾಕೌಟ್ ಹಂತಕ್ಕೆ ಪಾಕಿಸ್ತಾನ ಇಲ್ಲವೇ ನ್ಯೂಝಿಲ್ಯಾಂಡ್ ತೇರ್ಗಡೆಯಾಗುವುದನ್ನು ನೆಟ್ ರನ್ರೇಟ್ ಮೂಲಕ ನಿರ್ಧರಿಸಲಾಗುತ್ತದೆ.
ನ್ಯೂಝಿಲ್ಯಾಂಡ್ನ ಈಗಿನ ನೆಟ್ ರನ್ರೇಟ್(+0.398)ಪಾಕಿಸ್ತಾನಕ್ಕಿಂತ(+0.036)ಉತ್ತಮವಾಗಿದೆ. ನ್ಯೂಝಿಲ್ಯಾಂಡ್ನ ನೆಟ್ ರನ್ರೇಟ್ ಹಿಂದಿಕ್ಕಬೇಕಾದರೆ ಇಂಗ್ಲೆಂಡ್ ವಿರುದ್ಧ ಪಾಕ್ ದೊಡ್ಡ ಅಂತರದಿಂದ ಜಯ ಸಾಧಿಸಬೇಕು. ಒಂದು ವೇಳೆ ಅಫ್ಘಾನಿಸ್ತಾನ ಉಳಿದಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೆ 10 ಅಂಕ ಗಳಿಸಲಿದೆ. ಆದರೆ ಅದರ ರನ್ರೇಟ್(-0.330) ಸೆಮಿ ಫೈನಲ್ ತಲುಪಲು ಪೂರಕವಾಗಿಲ್ಲ.
ಸನ್ನಿವೇಶ 3: ಒಂದು ವೇಳೆ ಬೆಂಗಳೂರಿನಲ್ಲಿ ನಡೆಯುವ ನ್ಯೂಝಿಲ್ಯಾಂಡ್-ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯ ಮಳೆಯಿಂದ ಕೊಚ್ಚಿಹೋದರೆ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ 10 ಅಂಕ ಗಳಿಸಿ ಕಿವೀಸನ್ನು ಹಿಂದಿಕ್ಕಲಿದೆ. ಅಫ್ಘಾನಿಸ್ತಾನ ಇನ್ನೊಂದು ಪಂದ್ಯ ಗೆದ್ದರೆ 10 ಅಂಕ ಗಳಿಸಲಿದೆ. ಆಗ ಸೆಮಿ ಫೈನಲ್ ಸ್ಥಾನವನ್ನು ನೆಟ್ ರನ್ರೇಟ್ ನಿರ್ಧರಿಸುತ್ತದೆ.
ಒಂದು ವೇಳೆ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ನ ಪಂದ್ಯಗಳು ಮಳೆಗಾಹುತಿಯಾದರೆ ನ್ಯೂಝಿಲ್ಯಾಂಡ್ ಉತ್ತಮ ರನ್ರೇಟ್ ಆಧಾರದಲ್ಲಿ ನಾಕೌಟ್ ಹಂತ ಪ್ರವೇಶಿಸಲಿದೆ.