ಒಲಿಂಪಿಕ್ಸ್ 2024 | ಭಾರತೀಯ ಟೇಬಲ್ ಟೆನಿಸ್ ತಂಡದಲ್ಲಿ ಆಟಗಾರರಿಗಿಂತ ನೆರವು ಸಿಬ್ಬಂದಿಗಳ ಸಂಖ್ಯೆಯೇ ಹೆಚ್ಚು!
ಮ್ಯಾಸಿಮೊ ಕಾಸ್ಟಾಂಟಿನಿ | PTI
ಹೊಸದಿಲ್ಲಿ: ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ, ಜರ್ಮನಿಯ ನಗರವಾದ ಸಾರ್ಬ್ರೂಕನ್ನಲ್ಲಿ ಭಾರತೀಯ ಟೇಬಲ್ ಟೆನಿಸ್ ತಂಡದ ಆಟಗಾರರು ತರಬೇತಿಯಲ್ಲಿ ನಿರತರಾಗಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ, ಭಾರತೀಯ ಟೇಬಲ್ ಟೆನಿಸ್ ತಂಡದಲ್ಲಿರುವ ಆಟಗಾರರಿಗಿಂತ ನೆರವು ಸಿಬ್ಬಂದಿಗಳೇ ಹೆಚ್ಚಿರುವುದು!
ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ಭಾರತೀಯ ತಂಡದ ಮುಖ್ಯ ಕೋಚ್ ಆಗಿ ಮೂರನೆಯ ಬಾರಿಗೆ ಮರಳಿರುವ ಇಟಲಿಯ ಮ್ಯಾಸಿಮೊ ಕಾಸ್ಟಾಂಟಿನಿಯು ಭಾರತ ತಂಡದ ಮಾಜಿ ಆಟಗಾರ ಸೌರವ್ ಚಕ್ರವರ್ತಿಯಿಂದ ಮತ್ತೊಬ್ಬ ರಾಷ್ಟ್ರೀಯ ಕೋಚ್ ಆಗಿ ನೆರವು ಪಡೆಯಲಿದ್ದಾರೆ.
ಅಸಹಜ ಸಂಗತಿಯೆಂದರೆ, ಭಾರತೀಯ ಟೇಬಲ್ ಟೆನಿಸ್ ತಂಡದೊಂದಿಗೆ ನಾಲ್ವರು ಖಾಸಗಿ ತರಬೇತುದಾರರು ಪ್ರಯಾಣಿಸಲು ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಮಹಿಳಾ ತಂಡದ ಮೂವರು ಸದಸ್ಯರೂ ಜುಲೈ 26ರಿಂದ ಪ್ರಾರಂಭಗೊಳ್ಳಲಿರುವ ಕ್ರೀಡಾಕೂಟದುದ್ದಕ್ಕೂ ತಮಗೆ ಖಾಸಗಿ ತರಬೇತುದಾರರು ಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಒಂಬತ್ತು ಮಂದಿ ನೆರವು ಸಿಬ್ಬಂದಿಗಳ ಪೈಕಿ ಇಬ್ಬರು ಮಸಾಜುದಾರರು ಹಾಗೂ ಓರ್ವ ಫಿಸಿಯೊ ಇದ್ದರೆ, ಆಡುವ ತಂಡಗಳಿಂದ ಆರು ಮಂದಿ ಸದಸ್ಯರಿದ್ದಾರೆ (ಮೂವರು ಪುರುಷರು ಹಾಗೂ ಮೂವರು ಮಹಿಳೆಯರು).
ತಂಡದಲ್ಲಿ ಇಷ್ಟು ಮಂದಿ ತರಬೇತುದಾರರು ಇರುವುದರಿಂದ ಪ್ರತಿಯೊಬ್ಬರಿಗೂ ಅವರದೇ ಆದ ಆಟದ ತಂತ್ರಗಳಿರುವ ಸಾಧ್ಯತೆ ಇರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಮಾತುಗಳನ್ನು ಅಲ್ಲಗಳೆದಿರುವ ಮುಖ್ಯ ಕೋಚ್ ಕಾಸ್ವಾಂಟಿನಿ, ಇದರಿಂದ ತಂಡದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
"ಖಾಸಗಿ ತರಬೇತುದಾರರು ತಂಡದ ತಾಂತ್ರಿಕತೆಯ ಭಾಗವಾಗಿದ್ದಾರೆ. ಅವರಿಗೆ ಅವರದೇ ಆದ ಆಟದ ತಂತ್ರಗಳಿರುತ್ತವೆ. ನನಗೆ ನನ್ನದೇ ಆದ ಆಟದ ತಂತ್ರಗಳಿರುತ್ತವೆ. ಅವರ ಮಾತುಗಳನ್ನು ನಾನು ಕೇಳುತ್ತೇನೆ ಹಾಗೂ ನನ್ನ ಮಾತುಗಳನ್ನು ಅವರು ಕೇಳುತ್ತಾರೆ. ಕೊನೆಗೆ ನಿರ್ಣಯ ಕೈಗೊಳ್ಳುವ ಅಧಿಕಾರ ನನ್ನ ಬಳಿಯೇ ಇರುತ್ತದೆ. ಇದರಲ್ಲಿ ನನಗೆ ಯಾವುದೇ ತಪ್ಪು ಕಂಡು ಬರುತ್ತಿಲ್ಲ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಆದರೆ, ನಿಯೋಜಿತ ತಂಡದ ತರಬೇತುದಾರರಿಗೆ ಮಾತ್ರ ಆಟದ ಮೈದಾನವನ್ನು ಪ್ರವೇಶಿಸಲು ಅನುಮತಿ ಇರುತ್ತದೆ ಹಾಗೂ ಅವರು ಕ್ರೀಡಾ ಗ್ರಾಮದಿಂದ ಹೊರಗೂ ಉಳಿಯುತ್ತಾರೆ. ಹೀಗಾಗಿ ತಂಡದ ಆಟಗಾರರಿಗಿಂತ ತಂಡದ ನೆರವು ಸಿಬ್ಬಂದಿಗಳ ಸಂಖ್ಯೆಯೇ ಹೆಚ್ಚಿರುವ ಬಗ್ಗೆ ಕ್ರೀಡಾ ವಿಶ್ಲೇಷಕರಿಂದ ಆಕ್ಷೇಪ ವ್ಯಕ್ತವಾಗಿದೆ.