ಒಲಿಂಪಿಕ್ಸ್ | ಮೊದಲ ಚಿನ್ನ ಗೆದ್ದ ತಟಸ್ಥ ಅಥ್ಲೀಟ್
ಇವಾನ್ ಲಿಟ್ವಿನೊವಿಕ್ | PC : X
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಟಸ್ಥ ಅಥ್ಲೀಟ್ ಆಗಿ ಸ್ಪರ್ಧಿಸಿರುವ ಬೆಲಾರುಸ್ನ ಇವಾನ್ ಲಿಟ್ವಿನೊವಿಕ್ ಶುಕ್ರವಾರ ಟ್ರಾಂಪೊಲಿನ್ (ಬಲೆಯ ಮೇಲಿನಿಂದ ಜಿಗಿಯುವುದು) ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಹಾಲಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಮೊದಲ ತಟಸ್ಥ ಅಥ್ಲೀಟ್ ಆಗಿದ್ದಾರೆ. ಆದರೆ ಅದು ಅಧಿಕೃತ ಪದಕಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
23 ವರ್ಷದ ಇವಾನ್ ಪುರುಷರ ಟ್ರಾಂಪೊಲಿನ್ ಫೈನಲ್ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಚೀನಾದ ವಾಂಗ್ ಝಿಸೈ ಮತ್ತು ಯಾನ್ ಲಾಂಗ್ಯು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
ರಶ್ಯವು 2022 ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಯುದ್ಧ ಆರಂಭಿಸಿರುವ ಹಿನ್ನೆಲೆಯಲ್ಲಿ, ರಶ್ಯ ಮತ್ತು ಅದರ ಮಿತ್ರ ದೇಶ ಬೆಲಾರುಸ್ನ ಅಥ್ಲೀಟ್ಗಳನ್ನು ಜಾಗತಿಕ ಕ್ರೀಡೆಯಿಂದ ನಿಷೇಧಿಸಲಾಗಿದೆ. ಹಾಗಾಗಿ, ಅವರು ತಟಸ್ಥ ಅಥ್ಲೀಟ್ಗಳಾಗಿ ಈ ಜಾಗತಿಕ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ತಟಸ್ಥ ಅಥ್ಲೀಟ್ಗಳಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅಥವಾ ತಮ್ಮ ರಾಷ್ಟ್ರೀಯ ಧ್ವಜಗಳ ಅಡಿಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಅಥ್ಲೀಟ್ಗಳು ಪದಕಗಳನ್ನು ಗೆದ್ದರೆ, ಅವರ ಸಾಧನೆಗಳನ್ನು ಪದಕ ಪಟ್ಟಿಯಲ್ಲಿ ಪ್ರಕಟಿಸಲಾಗುವುದಿಲ್ಲ.
ತಟಸ್ಥ ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸುವ ಆಹ್ವಾನವನ್ನು 15 ರಶ್ಯನ್ ಮತ್ತು 17 ಬೆಲಾರುಸ್ ಅಥ್ಲೀಟ್ಗಳು ಸ್ವೀಕರಿಸಿದ್ದಾರೆ.
ಶುಕ್ರವಾರ ಬೆಲಾರುಸ್ನ ಇನ್ನೋರ್ವ ತಟಸ್ಥ ಅಥ್ಲೀಟ್ ವಿಯಲೆಟ ಬಾರ್ಜಿಲೌಸ್ಕಯ ಮಹಿಳೆಯರ ಟ್ರಾಂಪೊಲಿನ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.