ಆರೆಂಜ್ ಕ್ಯಾಪ್- 2024: ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ, 2ನೇ ಸ್ಥಾನದಲ್ಲಿ ಸಾಯಿ ಸುದರ್ಶನ್, ಗಿಲ್ ಗೆ 4ನೇ ಸ್ಥಾನ
ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 5 ಇನಿಂಗ್ಸ್ಗಳಲ್ಲಿ ಒಟ್ಟು 316 ರನ್ ಗಳಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋತಿದ್ದರೂ ಆ ತಂಡದ ಆಟಗಾರ ಸಾಯಿ ಸುದರ್ಶನ್ ಒಟ್ಟು 191 ರನ್ನೊಂದಿಗೆ ಆರೆಂಜ್ ಕ್ಯಾಪ್ ರೇಸ್ ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗುಜರಾತ್ ನಾಯಕ ಶುಭಮನ್ ಗಿಲ್ ಹಾಗೂ ನಿಕೊಲಸ್ ಪೂರನ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.
ಈ ವರ್ಷದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 113 ರನ್ ಗಳಿಸಿ ಜೀವನಶ್ರೇಷ್ಠ ಇನಿಂಗ್ಸ್ ಆಡಿದ್ದರು. ಈ ಮೂಲಕ ಅವರು ಆರೆಂಜ್ ಕ್ಯಾಪನ್ನು ಧರಿಸಿದ್ದರು. ಗುಜರಾತ್ ಹಾಗೂ ಲಕ್ನೊ ನಡುವಿನ ಪಂದ್ಯ ನಂತರ ಆರೆಂಜ್ಕ್ಯಾಪ್ ಲಿಸ್ಟ್ ನಲ್ಲಿ ಅಗ್ರ-5ರಲ್ಲಿ ಬದಲಾವಣೆ ಆಗಿದೆ. 5 ಇನಿಂಗ್ಸ್ ಗಳಲ್ಲಿ 191 ರನ್ ಗಳಿಸಿರುವ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ನ ಪ್ರಬಲ ಸ್ಪರ್ಧಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ನ ರಿಯಾನ್ ಪರಾಗ್ 4 ಇನಿಂಗ್ಸ್ ಗಳಲ್ಲಿ 185 ರನ್ ಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ 5 ಇನಿಂಗ್ಸ್ ಗಳಲ್ಲಿ 183 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದರೆ, ನಿಕೊಲಸ್ ಪೂರನ್ 4 ಇನಿಂಗ್ಸ್ ಗಳಲ್ಲಿ ಒಟ್ಟು 178 ರನ್ ಗಳಿಸಿ ಪಟ್ಟಿಯಲ್ಲಿ ಟಾಪ್-5ರಲ್ಲಿದ್ದಾರೆ.
ಈ ತನಕ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಪಡೆದ ಆಟಗಾರರು
ವರ್ಷ ಆರೆಂಜ್ ಕ್ಯಾಪ್ ಧಾರಿ ತಂಡ
2023 ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್
2022 ಋತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್
2021 ಎಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್
2020 ಕೆ.ಎಲ್.ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್
2019 ಡೇವಿಡ್ ವಾರ್ನರ್ ಸನ್ರೈಸರ್ಸ್ ಹೈದರಾಬಾದ್
2018 ಕೇನ್ ವಿಲಿಯಮ್ಸನ್ ಸನ್ರೈಸರ್ಸ್ ಹೈದರಾಬಾದ್
2017 ಡೇವಿಡ್ ವಾರ್ನರ್ ಸನ್ರೈಸರ್ಸ್ ಹೈದರಾಬಾದ್
2016 ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು
2015 ಡೇವಿಡ್ ವಾರ್ನರ್ ಸನ್ರೈಸರ್ಸ್ ಹೈದರಾಬಾದ್