ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ 400ಕ್ಕೂ ಅಧಿಕ ಮಂದಿ ಸಾವು: ಕೇಂದ್ರ ಸರ್ಕಾರ
ಹೊಸದಿಲ್ಲಿ: ಗಟಾರಗಳು ಹಾಗೂ ಒಳ ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ 2018ರಲ್ಲಿ 76 ಮಂದಿ, 2019ರಲ್ಲಿ 133 ಮಂದಿ, 2020ರಲ್ಲಿ 35 ಮಂದಿ, 2021ರಲ್ಲಿ 66 ಮಂದಿ, 2022ರಲ್ಲಿ 84 ಮಂದಿ ಹಾಗೂ 2023ರಲ್ಲಿ 49 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿನ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯೆ ಅಪರೂಪ ಪೊಡ್ಡಾರ್ ಕೇಳಿದ ಪ್ರಶ್ನೆಗೆ ಸಚಿವ ರಾಮದಾಸ್ ಅಠಾವಳೆ ಮೇಲಿನಂತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಂಸತ್ತಿನಲ್ಲಿ ಮಂಡಿಸಲಾದ ದತ್ತಾಂಶದ ಪ್ರಕಾರ, 2023ರಲ್ಲಿ 49 ಮರಣ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಜಸ್ಥಾನದಲ್ಲಿ 10 ಮಂದಿ, ಗುಜರಾತ್ ನಲ್ಲಿ 9 ಮಂದಿ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ 7 ಮಂದಿ, ಪಶ್ಚಿಮ ಬಂಗಾಳದಲ್ಲಿ ಮೂವರು, ಬಿಹಾರ, ಮಧ್ಯಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಇಬ್ಬರು ಹಾಗೂ ಪಂಜಾಬ್ ಮತ್ತು ಝಾರ್ಖಂಡ್ ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
“ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ಹಾಗೂ ಅವರ ಪುನರ್ವಸತಿ ಕಾಯ್ದೆ, 2013ರ ಪ್ರಕಾರ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ದೇಶದಲ್ಲಿ ನಿಷೇಧಗೊಂಡಿರುವ ಚಟುವಟಿಕೆಯಾಗಿದೆ. 29.11.2023ಕ್ಕೆ ಅಂತ್ಯಗೊಂಡಂತೆ, ಭಾರತದಲ್ಲಿರುವ 766 ಜಿಲ್ಲೆಗಳ ಪೈಕಿ 714 ಜಿಲ್ಲೆಗಳು ತಮ್ಮನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಮುಕ್ತ ಜಿಲ್ಲೆಗಳು ಎಂದು ವರದಿ ಮಾಡಿಕೊಂಡಿವೆ” ಎಂದು ಅಠಾವಳೆ ತಿಳಿಸಿದ್ದಾರೆ.