22 ವರ್ಷಗಳಲ್ಲಿ ಆಸ್ಟ್ರೇಲಿಯದಲ್ಲಿ ಮೊದಲ ಏಕದಿನ ಸರಣಿ ಗೆದ್ದ ಪಾಕಿಸ್ತಾನ
PC : ANI
ಪರ್ತ್ : ಸಲೀಮ್ ಅಯೂಬ್ (42) ಮತ್ತು ಅಬ್ದುಲ್ಲಾ ಶಫೀಕ್ (37)ರ ಸ್ಫೂರ್ತಿಯುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಪ್ರವಾಸಿ ಪಾಕಿಸ್ತಾನವು ರವಿವಾರ ಎಂಟು ವಿಕೆಟ್ಗಳ ಭರ್ಜರಿ ಅಂತರದಿಂದ ಗೆದ್ದಿದೆ.
ಇದರೊಂದಿಗೆ ಪಾಕಿಸ್ತಾನವು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿದೆ. ಪಾಕಿಸ್ತಾನವು ಆಸ್ಟ್ರೇಲಿಯದಲ್ಲಿ ಏಕದಿನ ಸರಣಿಯೊಂದನ್ನು ಗೆದ್ದಿರುವುದು 22 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಇದಕ್ಕೂ ಮೊದಲು, ಪಾಕಿಸ್ತಾನವು 2002ರಲ್ಲಿ ಆಸ್ಟ್ರೇಲಿಯದಲ್ಲಿ ಏಕದಿನ ಸರಣಿಯನ್ನು ಗೆದ್ದಿತ್ತು.
ಪರ್ತ್ ಸ್ಟೇಡಿಯಮ್ನಲ್ಲಿ, ನಸೀಮ್ ಶಾ, ಶಹೀನ್ ಶಾ ಅಫ್ರಿದಿ ಮತ್ತು ಹಾರಿಸ್ ರವೂಫ್ ವಿಶ್ವ ಚಾಂಪಿಯನ್ನರನ್ನು ಮೊದಲು 140 ರನ್ ಗೆ ನಿಯಂತ್ರಿಸಿದ ಬಳಿಕ, ಮುಹಮ್ಮದ್ ರಿಝ್ವಾನ್ ನೇತೃತ್ವದ ಪಾಕಿಸ್ತಾನವು ಕೇವಲ 27ನೇ ಓವರ್ನಲ್ಲಿ ತನ್ನ ಗುರಿಯನ್ನು ತಲುಪಿತು.
ಮೆಲ್ಬರ್ನ್ನಲ್ಲಿ ನಡೆದ ಮೊದಲ ಪಂದ್ಯವನ್ನು ಪಾಕಿಸ್ತಾನವು ಎರಡು ವಿಕೆಟ್ಗಳಿಂದ ಸೋತಿತ್ತು. ಆದರೆ, ಬಳಿಕ ಪುಟಿದೆದ್ದು ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯವನ್ನು ಒಂಭತ್ತು ವಿಕೆಟ್ಗಳಿಂದ ಗೆದ್ದಿದೆ.
ಈ ತಿಂಗಳ ಉತ್ತರಾರ್ಧದಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ, ಆತಿಥೇಯ ತಂಡವು ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶಾನ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್ ವುಡ್ ಮತ್ತು ಮಿಚೆಲ್ ಸ್ಟಾರ್ಕ್ರಿಗೆ ವಿಶ್ರಾಂತಿ ನೀಡಿತ್ತು. ಈ ಪಂದ್ಯದಲ್ಲಿ ಅವರ ಅನುಪಸ್ಥಿತಿ ತಂಡವನ್ನು ಕಾಡಿತು.
ಗೆಲ್ಲಲು 50 ಓವರ್ಗಳಲ್ಲಿ 141 ರನ್ ಗಳನ್ನು ಗಳಿಸುವ ಸುಲಭ ಗುರಿಯನ್ನು ಪಡೆದ ಪಾಕಿಸ್ತಾನಕ್ಕೆ ಆರಂಭಿಕರಾದ ಸಯೀಮ್ ಅಯೂಬ್ (52 ಎಸೆತಗಳಲ್ಲಿ 42 ರನ್) ಮತ್ತು ಅಬ್ದುಲ್ಲಾ ಶಫೀಕ್ (53 ಎಸೆತಗಳಲ್ಲಿ 37 ರನ್) ಉತ್ತಮ ಆರಂಭ ಒದಗಿಸಿದರು. ಅವರು ಮೊದಲನೇ ವಿಕೆಟ್ ಗೆ 84 ರನ್ಗಳನ್ನು ಸೇರಿಸಿದರು.
ಬಳಿಕ ರಿಝ್ವಾನ್ (30) ಮತ್ತು ಬಾಬರ್ ಅಝಮ್ (28) ರನ್ ಗಳಿಸಿ ಗುರಿ ಪೂರ್ತಿಗೊಳಿಸಿದರು.
ಆಸ್ಟ್ರೇಲಿಯದ ಪರವಾಗಿ ಲ್ಯಾನ್ಸ್ ಮೊರಿಸ್ 6 ಓವರ್ಗಳಲ್ಲಿ 24 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಉರುಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಪಾಕಿಸ್ತಾನವು ಆತಿಥೇಯರನ್ನು ಬ್ಯಾಟಿಂಗ್ಗೆ ಇಳಿಸಿತು. ಆಸ್ಟ್ರೇಲಿಯ ಬ್ಯಾಟರ್ಗಳು ಅಫ್ರಿದಿ (3-32), ಶಾ (3-54) ಮತ್ತು ರವೂಫ್ (2-24)ರ ಬೌಲಿಂಗ್ ಮಟ್ಟಕ್ಕೆ ಸರಿಸಾಟಿಯಾಗಲಿಲ್ಲ.
ಇನಿಂಗ್ಸ್ನ ವೈಯಕ್ತಿಕ ಗರಿಷ್ಠ ಮೊತ್ತ (41 ಎಸೆತಗಳಲ್ಲಿ 30 ರನ್)ವನ್ನು ಶಾನ್ ಅಬೋಟ್ ಬಾರಿಸಿದರು. ಆರಂಭಿಕ ಮ್ಯಾಥ್ಯೂ ಶಾರ್ಟ್ 22 ರನ್ ಗಳ ಕೊಡುಗೆ ನೀಡಿದರು.
ಅಂತಿಮವಾಗಿ ಆಸ್ಟ್ರೇಲಿಯವು 31.5 ಓವರ್ಗಳಲ್ಲಿ ಕೇವ 140 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಫಾರ್ಮ್ ಕಳೆದುಕೊಂಡಿರುವ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 2 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಹಾರಿಸ್ ರವೂಫ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಅಂತಿಮವಾಗಿ ಅಬೋಟ್ ಮತ್ತು ಆ್ಯಡಮ್ ಝಾಂಪ (13) 30 ರನ್ಗಳ ಭಾಗೀದಾರಿಕೆ ನಿಭಾಯಿಸಿದರು.
ಮಹತ್ವದ ಎರಡು ವಿಕೆಟ್ಗಳನ್ನು ಉರುಳಿಸಿದ ಹಾರಿಸ್ ರವೂಫ್ ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಸರಣಿಯಲ್ಲಿ ಒಟ್ಟು 10 ವಿಕೆಟ್ ಗಳನ್ನು ಪಡೆದ ಅವರನ್ನೇ ಸರಣಿಶ್ರೇಷ್ಠ ಪ್ರಶಸ್ತಿಗೆ ಆರಿಸಲಾಯಿತು.