ಮೂರನೇ ಟಿ20 | ಪಾಕಿಸ್ತಾನಕ್ಕೆ ಸೋಲು ; ಸರಣಿ ಕ್ಲೀನ್ ಸ್ವೀಪ್ ಗೈದ ಆಸ್ಟ್ರೇಲಿಯ ಕ್ರಿಕೆಟ್ ತಂಡ
ಹೊಬರ್ಟ್ : ಮೂರನೇ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್ಗಳ ಅಂತರದಿಂದ ಸುಲಭ ಜಯ ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ-20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ಸ್ವೀಪ್ ಸಾಧಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 118 ರನ್ ಗುರಿ ಪಡೆದ ಆಸ್ಟ್ರೇಲಿಯ ತಂಡವು ಇನ್ನೂ 52 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಕೇವಲ 27 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಿತ ಔಟಾಗದೆ 61 ರನ್ ಗಳಿಸಿದ ಮಾರ್ಕಸ್ ಸ್ಟೋಯಿನಿಸ್ 11.2 ಓವರ್ಗಳಲ್ಲಿ ಆಸ್ಟ್ರೇಲಿಯ ತಂಡಕ್ಕೆ ಗೆಲುವನ್ನು ತಂದು ಕೊಟ್ಟರು.
ಪಾಕಿಸ್ತಾನ ತಂಡವು ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ವೈಫಲ್ಯ ಕಂಡಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡವು 19 ಓವರ್ಗಳಲ್ಲಿ ಕೇವಲ 117 ರನ್ಗೆ ಸರ್ವಪತನಗೊಂಡಿತು. ಪಾಕಿಸ್ತಾನದ ಪರ ಬಾಬರ್ ಆಝಮ್(41 ರನ್, 28 ಎಸೆತ, 4 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು.
ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ಆ್ಯರೊನ್ ಹಾರ್ಡಿ(3-21)ಯಶಸ್ವಿ ಬೌಲರ್ ಎನಿಸಿಕೊಂಡರು. ಆ್ಯಡಮ್ ಝಂಪಾ(2-11) ಹಾಗೂ ಸ್ಪೆನ್ಸರ್ ಜಾನ್ಸನ್(2-24)ತಲಾ ಎರಡು ವಿಕೆಟ್ಗಳನ್ನು ಪಡೆದರು.
ಭರ್ಜರಿ ಫಾರ್ಮ್ ಪ್ರದರ್ಶಿಸಿದ ಸ್ಟೋಯಿನಿಸ್ ತನ್ನ 27 ಎಸೆತಗಳ ಇನಿಂಗ್ಸ್ನಲ್ಲಿ ಐದು ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಸಿಡಿಸಿದರು. ನಾಯಕ ಜೋಶ್ ಇಂಗ್ಲಿಸ್ರೊಂದಿಗೆ ನಿರ್ಣಾಯಕ 55 ರನ್ ಜೊತೆಯಾಟ ನಡೆಸಿದರು.
ಮತ್ತೊಂದು ಗೆಲುವಿನೊಂದಿಗೆ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಆಸ್ಟ್ರೇಲಿಯದ ನಾಯಕ ಜೋಸ್ ಇಂಗ್ಲಿಸ್ ಹೇಳಿದ್ದಾರೆ.
ಸರಣಿಯುದ್ದಕ್ಕೂ ಪಾರಮ್ಯ ಮೆರೆದಿದ್ದ ಆಸ್ಟ್ರೇಲಿಯ ತಂಡವು ಬ್ರಿಸ್ಬೇನ್ ಹಾಗೂ ಸಿಡ್ನಿಯಲ್ಲಿ ನಡೆದಿರುವ ಮೊದಲೆರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದುಕೊಂಡಿತು.
ಪಾಕಿಸ್ತಾನ ತಂಡವು 10ನೇ ಓವರ್ನಲ್ಲಿ 70 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಕಳಪೆ ಆರಂಭದಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ ನಿರಂತರ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಉತ್ತಮ ಜೊತೆಯಾಟ ನಡೆಸುವಲ್ಲಿಯೂ ವಿಫಲವಾಯಿತು. ಪಾಕಿಸ್ತಾನದ ಇನಿಂಗ್ಸ್ನಲ್ಲಿ ಶಾಹೀನ್ ಶಾ ಅಫ್ರಿದಿ ಏಕೈಕ ಸಿಕ್ಸರ್ ಸಿಡಿಸಿದರು. ಇದು ಕಳಪೆ ಬ್ಯಾಟಿಂಗ್ಗೆ ಸಾಕ್ಷಿಯಾಯಿತು.
ಖಾಯಂ ನಾಯಕ ಮುಹಮ್ಮದ್ ರಿಝ್ವಾನ್ ಅನುಪಸ್ಥಿತಿಯಲ್ಲಿ ಸಾಹಿಬ್ಝದಾ ಫರ್ಹಾನ್ ಅವರು ಆಝಮ್ರೊಂದಿಗೆ ಬ್ಯಾಟಿಂಗ್ ಆರಂಭಿಸಿದರು. ಸ್ಪೆನ್ಸರ್ ಜಾನ್ಸನ್ಗೆ ವಿಕೆಟ್ ಒಪ್ಪಿಸುವ ಮೊದಲು ಫರ್ಹಾನ್(9 ರನ್) ಕೇವಲ 7 ಎಸೆತಗಳನ್ನು ಎದುರಿಸಿದರು.
ಆಝಮ್ ಹಾಗೂ ಹಸೀಬುಲ್ಲಾ ಖಾನ್(24 ರನ್)2ನೇ ವಿಕೆಟ್ಗೆ 44 ರನ್ ಸೇರಿಸಿದರು. ಆದರೆ ಖಾನ್ ಔಟಾದ ನಂತರ ಪಾಕಿಸ್ತಾನ ಕುಸಿತದ ಹಾದಿ ಹಿಡಿಯಿತು. ಉಸ್ಮಾನ್ ಖಾನ್(3 ರನ್) ಹಾಗೂ ಆಘಾ ಸಲ್ಮಾನ್(1 ರನ್)ಅವರು ಹಾರ್ಡಿಗೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆಗ ಪಾಕಿಸ್ತಾನ 70 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಪಾಕಿಸ್ತಾನದ ಪರ ಏಕಾಂಗಿ ಹೋರಾಟ ನೀಡಿದ ಆಝಮ್ 41 ರನ್ ಗಳಿಸಿ ಸ್ಪಿನ್ನರ್ ಝಂಪಾ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು.
ಪಾಕಿಸ್ತಾನದ ಬಾಲಂಗೋಚಿಗಳು ಒಂದಷ್ಟು ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಪಾಕ್ ತಂಡವು 18.1ನೇ ಓವರ್ನಲ್ಲಿ 117 ರನ್ ಗಳಿಸಿ ಆಲೌಟಾಯಿತು.ಅಫ್ರಿದಿ ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿದರು. ಇದು ಪಾಕಿಸ್ತಾನಕ್ಕೆ ಉಪಯೋಗಕ್ಕೆ ಬರಲಿಲ್ಲ.
ಫ್ರೆಸರ್-ಮೆಕ್ಗುರ್ಕ್ ಹಾಗೂ ಮ್ಯಾಥ್ಯೂ ಶಾರ್ಟ್ ಅವರು ಆಸ್ಟ್ರೇಲಿಯ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಅಫ್ರಿದಿ ಎಸೆದ ಮೊದಲ ಓವರ್ ನಲ್ಲಿ ಫ್ರೆಸರ್ ಸತತ ಬೌಂಡರಿಗಳನ್ನು ಗಳಿಸಿದರು. ಆದರೆ ಶಾರ್ಟ್ 2 ರನ್ ಗಳಿಸಿ 3ನೇ ಓವರ್ಗೆ ಔಟಾದರು. 18 ರನ್ ಗಳಿಸಿದ ಫ್ರೆಸರ್ 4ನೇ ಓವರ್ನಲ್ಲಿ ಔಟಾದರು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಇಂಗ್ಲಿಸ್ ಅವರು ಸ್ಟೋಯಿನಿಸ್ ಜೊತೆಗೆ 55 ರನ್ ಜೊತೆಯಾಟದಲ್ಲಿ ಭಾಗಿಯಾದರು. ಈ ವೇಳೆ ಆಕ್ರಮಣಕಾರಿ ಆಟವಾಡಿದ ಸ್ಟೋಯಿನಿಸ್ 5 ಸಿಕ್ಸರ್ ಹಾಗೂ 5 ಬೌಂಡರಿ ಗಳಿಸಿದರು. ಇಂಗ್ಲಿಸ್(27 ರನ್) 9ನೇ ಓವರ್ನಲ್ಲಿ ಅಬ್ಬಾಸ್ ಅಫ್ರಿದಿ ಬೌಲಿಂಗ್ನಲ್ಲಿ ರವೂಫ್ಗೆ ಕ್ಯಾಚ್ ನೀಡಿದರು.
ಸ್ಟೋಯಿನಿಸ್ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಬೌಂಡರಿಯ ಮೂಲಕ ಗೆಲುವಿನ ರನ್ ದಾಖಲಿಸಿದರು.