ಬುಮ್ರಾ ರೀತಿ ಪಾಕಿಸ್ತಾನ ಬೌಲರ್ಗಳು ಏಕೆ ಬೌಲಿಂಗ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಷ್ಟಕರ: ವಸಿಂ ಅಕ್ರಂ
Photo: instagram/wasimakramliveofficial
ಹೊಸದಿಲ್ಲಿ: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತಂಡ ರವಿವಾರ ಭರ್ಜರಿ ಜಯ ಸಾಧಿಸಿದ ನಂತರ ಭಾರತೀಯ ಬೌಲರ್ಗಳು ಎಲ್ಲೆಡೆಯಿಂದ ಶ್ಲಾಘನೆಗೆ ಒಳಗಾಗಿದ್ದಾರೆ.
ಈಗ ನಡೆಯುತ್ತಿರುವ ವಿಶ್ವಕಪ್ನಲ್ಲಿ ಬೌಲಿಂಗ್ನಲ್ಲಿ ಮಿಂಚುತ್ತಿರುವ ಜಸ್ಟ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ಅವರನ್ನು ಪಾಕಿಸ್ತಾನದ ಕ್ರಿಕೆಟ್ ದಂತಕತೆ ವಸೀಂ ಅಕ್ರಂ ಶ್ಲಾಘಿಸಿದರು.
ಪಾಕಿಸ್ತಾನದ ಬೌಲರ್ಗಳಿಗೆ ಜಸ್ಟ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡಲು ಏಕೆ ಸಾಧ್ಯವಿಲ್ಲ? ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಅಕ್ರಂರನ್ನು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ ಎಂದು ಒಪ್ಪಿಕೊಂಡ ಅಕ್ರಂ, ಇದಕ್ಕೆ ಕಾರಣವನ್ನು ನೀಡಿದರು. ಬುಮ್ರಾ ವಿಭಿನ್ನ ರೀತಿಯ ಬೌಲರ್. ಇದೀಗ ವಿಶ್ವ ಕ್ರಿಕೆಟ್ನಲ್ಲಿ ಅವರ ರೀತಿ ಪಾಕಿಸ್ತಾನಿ ಬೌಲರ್ಗಳು ಸೇರಿದಂತೆ ಯಾರೂ ಬೌಲಿಂಗ್ ಮಾಡುತ್ತಿಲ್ಲ ಎಂದರು.
ಬುಮ್ರಾ ರೀತಿಯ ಯಶಸ್ಸನ್ನು ಪಡೆಯಲು ಪಾಕ್ ಬೌಲರ್ಗಳಿಗೆ ಏಕೆ ಸಾಧ್ಯವಿಲ್ಲ ಎಂಬ ಕುರಿತು ಇನ್ನಷ್ಟು ಕಾರಣ ನೀಡಿದ ಅಕ್ರಂ, ನಮ್ಮ ಬೌಲರ್ಗಳು ತುಂಬಾ ಕಡಿಮೆ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ಜಸ್ಪ್ರೀತ್ ಬುಮ್ರಾ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಇತ್ತೀಚಿನ ಗಾಯದಿಂದ ಚೇತರಿಸಿಕೊಂಡು ವಾಪಸಾದ ನಂತರ ಅವರು ಏಕದಿನ ಕ್ರಿಕೆಟ್ ಆಡುತ್ತಿದ್ದಾರೆ. ಬೂಮ್ರಾ, ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೆ, ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಪ್ರಮುಖವಾಗಿ 10-40 ಓವರ್ಗಳಲ್ಲಿ ಬ್ಯಾಟರ್ಗಳಿಗೆ ಸವಾಲಾಗಿ ಪರಿಣಮಿಸಲು ಕಷ್ಟವಾಗುತ್ತದೆ. ನಮ್ಮ ಬೌಲರ್ ಗಳ ಸಮಸ್ಯೆ ಇಲ್ಲಿಯೇ ಅಡಗಿದೆ ಎಂದು ಹೇಳಿದರು.
ಬೂಮ್ರಾ ಅವರ ಬೌಲಿಂಗ್ ಶೈಲಿಯ ಕುರಿತು ಪಾಕ್ನ ಮಾಜಿ ವಿಕೆಟ್ಕೀಪರ್-ಬ್ಯಾಟರ್ ಮೊಯಿನ್ ಖಾನ್ ಪ್ರಸ್ತಾವಿಸಿದರು. ಬುಮ್ರಾ ಅವರ ಬೌಲಿಂಗ್ ಶೈಲಿ ಕೂಡ ಸಾಂಪ್ರದಾಯಿಕವಾಗಿಲ್ಲ. ಇದು ಖಂಡಿತವಾಗಿಯೂ ಅವರಿಗೆ ಲಾಭಕರವಾಗಿದೆ ಎಂದು ಮೊಯಿನ್ ಖಾನ್ ಅಭಿಪ್ರಾಯಪಟ್ಟರು.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ 87 ರನ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದ ಭಾರತವು ಬುಮ್ರಾ(3-32) ಹಾಗೂ ಮುಹಮ್ಮದ್ ಶಮಿ(4-22)ನೇತೃತ್ವದ ಬೌಲರ್ಗಳ ಸಾಹಸದಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 34.5 ಓವರ್ಗಳಲ್ಲಿ 129 ರನ್ಗೆ ನಿಯಂತ್ರಿಸಿತು. 100 ರನ್ನಿಂದ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು.