ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅನಪೇಕ್ಷಿತ ದಾಖಲೆ ಸರಿಗಟ್ಟಿದ ಪಾಕಿಸ್ತಾನ
PC : PTI
ಹೊಸದಿಲ್ಲಿ : ಟೀಮ್ ಇಂಡಿಯಾವು 48 ವರ್ಷಗಳ ಹಿಂದೆ ನಿರ್ಮಿಸಿದ್ದ ಅನಪೇಕ್ಷಿತ ದಾಖಲೆಯೊಂದನ್ನು ಪಾಕಿಸ್ತಾನ ಕ್ರಿಕೆಟ್ ತಂಡವು ಸರಿಗಟ್ಟಿದೆ.
ಪಾಕಿಸ್ತಾನ ತಂಡವು ರವಿವಾರ ಬಾಂಗ್ಲಾದೇಶ ವಿರುದ್ಧ ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಸೋತಿತ್ತು. ಈ ಆಘಾತಕಾರಿ ಸೋಲು ತವರು ನೆಲ ರಾವಲ್ಪಿಂಡಿಯಲ್ಲಿ ಎದುರಾಗಿದೆ. ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಗೆ
448 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಹೊರತಾಗಿಯೂ ಪಾಕಿಸ್ತಾನ ಸೋಲನುಭವಿಸಿತ್ತು. ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ ನಲ್ಲಿ 117ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಪಾಕಿಸ್ತಾನ ತಂಡ ತನ್ನ ಎರಡನೇ ಇನಿಂಗ್ಸ್ ನಲ್ಲಿ 146 ರನ್ಗೆ ಕುಸಿದಿತ್ತು. ಬಾಂಗ್ಲಾದೇಶ ತಂಡ 30 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
ಬಾಂಗ್ಲಾದೇಶ ತಂಡ ಪಾಕಿಸ್ತಾನ ವಿರುದ್ಧ ಅಡಿರುವ 14 ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿತು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಮೊದಲ ಇನಿಂಗ್ಸ್ ನ್ನು ಡಿಕ್ಲೇರ್ ಮಾಡಿಕೊಂಡ ನಂತರ ತಂಡವೊಂದು ಸೋತಿರುವ 17ನೇ ನಿದರ್ಶನ ಇದಾಗಿದೆ.
ಪಾಕಿಸ್ತಾನ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ ನಂತರ ಮೂರನೇ ಬಾರಿ ಸೋಲುಂಡಿದೆ.
ಪಾಕಿಸ್ತಾನವು 1961ರಲ್ಲಿ ಇಂಗ್ಲೆಂಡ್ ವಿರುದ್ಧ ಲಾಹೋರ್ ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 9 ವಿಕಟ್ ಗೆ 387 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಆದರೆ 5 ವಿಕೆಟ್ ಗಳಿಂದ ಸೋಲುಂಡಿತ್ತು. 2016ರಲ್ಲಿ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿದ ಹೊರತಾಗಿಯೂ ಆಸ್ಟ್ರೇಲಿಯಕ್ಕೆ ಸೋಲುಂಡಿತ್ತು.
ಭಾರತ ಕೂಡ 1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ ಸ್ಟನ್ ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇದೇ ರೀತಿಯ ಸೋಲು ಕಂಡಿತ್ತು. ಆಗ ಭಾರತವು 6 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು. ಆದರೆ ಪಂದ್ಯವನ್ನು 10 ವಿಕೆಟ್ ಗಳ ಅಂತರದಿಂದ ಸೋತಿತ್ತು. ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡದ ಸೋಲು ಭಾರತ 1976ರಲ್ಲಿ ಕಂಡ ಸೋಲನ್ನು ನೆನಪಿಸಿದೆ.
ಬಿಷನ್ ಸಿಂಗ್ ಬೇಡಿ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 306 ರನ್ ಗಳಿಸಿತ್ತು. ಅಪಾಯಕಾರಿ ಪಿಚ್ನಲ್ಲಿ ಭಾರತದ ಕೆಳ ಕ್ರಮಾಂಕದ ಆಟಗಾರರು ವೆಸ್ಟ್ ಇಂಡೀಸ್ನ ವೇಗದ ಬೌಲರ್ಗಳನ್ನು ಎದುರಿಸುವಲ್ಲಿ ಎಡವಿದರು. ಪರಿಣಾಮವಾಗಿ ಭಾರತವು 10 ವಿಕೆಟ್ಗಳಿಂದ ಸೋಲುಂಡಿತ್ತು. ಇದೀಗ ಪಾಕಿಸ್ತಾನ ತಂಡ ಕೂಡ ತನ್ನ ಮೊದಲ ಇನಿಂಗ್ಸ್ ನ್ನು ಡಿಕ್ಲೇರ್ ಮಾಡಿದ ನಂತರ 10 ವಿಕೆಟ್ಗಳಿಂದ ಸೋಲನುಭವಿಸಿ ಭಾರತದೊಂದಿಗೆ ಅನಪೇಕ್ಷಿತ ದಾಖಲೆಯನ್ನು ಹಂಚಿಕೊಂಡಿದೆ.