ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ; ಪಾಕ್ ಆಟಗಾರನಿಗೆ ಭಾರೀ ದಂಡ

ಖುಶ್ದಿಲ್ ಶಾ | PC : NDTV
ಕ್ರೈಸ್ಟ್ಚರ್ಚ್: ರವಿವಾರ ಕ್ರೈಸ್ಟ್ಚರ್ಚ್ನಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಎರಡನೇ ಹಂತದ ಉಲಂಘನೆಗೈದಿರುವುದಕ್ಕಾಗಿ ಪಾಕಿಸ್ತಾನದ ಆಲ್ರೌಂಡರ್ ಖುಶ್ದಿಲ್ ಶಾಗೆ ಅವರ ಪಂದ್ಯ ಶುಲ್ಕದ 50 ಶೇಕಡ ದಂಡ ವಿಧಿಸಲಾಗಿದೆ.
ನ್ಯೂಝಿಲ್ಯಾಂಡ್ ಬೌಲರ್ ಝಕಾರಿ ಫೋಕ್ಸ್ಗೆ ಢಿಕ್ಕಿಯಾಗಿರುವುದಕ್ಕಾಗಿ ಪಾಕಿಸ್ತಾನಿ ಆಟಗಾರನಿಗೆ ಈ ದಂಡ ವಿಧಿಸಲಾಗಿದೆ. ಪಾಕಿಸ್ತಾನಿ ಇನಿಂಗ್ಸ್ನ 8ನೇ ಓವರ್ನಲ್ಲಿ ಈ ಘಟನೆ ಸಂಭವಿಸಿದೆ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅನುಚಿತ ದೈಹಿಕ ಸ್ಪರ್ಶಕ್ಕೆ ಸಂಬಂಧಿಸಿದ 2.12 ವಿಧಿಯಡಿಯಲ್ಲಿ ಐಸಿಸಿ, ಖುಶ್ದಿಲ್ ಶಾಗೆ ದಂಡ ವಿಧಿಸಿದೆ. ‘‘ಈ ಢಿಕ್ಕಿಯು ಬಲವಂತದ ದೈಹಿಕ ಸ್ಪರ್ಶವಾಗಿದ್ದು, ನಿರ್ಲಕ್ಷ್ಯದಿಂದ ಸಂಭವಿಸಿದೆ ಮತ್ತು ಅದನ್ನು ತಡೆಯಬಹುದಾಗಿತ್ತು’’ ಎಂದು ಪಂದ್ಯ ರೆಫರಿ ಜೆಫ್ ಕ್ರೋವ್ ಸೇರಿದಂತೆ ಪಂದ್ಯದ ಅಧಿಕಾರಿಗಳು ತೀರ್ಮಾನಿಸಿದರು.
ಖುಶ್ದಿಲ್ ಈ ಆರೋಪ ಮತ್ತು ದಂಡವನ್ನು ಸ್ವೀಕರಿಸಿದ್ದಾರೆ. ಹಾಗಾಗಿ, ಔಪಚಾರಿಕ ವಿಚಾರಣೆಯ ಅಗತ್ಯವಿರುವುದಿಲ್ಲ.
ಭಾರೀ ದಂಡದ ಜೊತೆಗೆ, ಖುಶ್ದಿಲ್ರ ಶಿಸ್ತು ದಾಖಲೆಗೆ ಮೂರು ಡೀಮೆರಿಟ್ (ಅನರ್ಹತೆ) ಅಂಕಗಳನ್ನು ಸೇರಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 91 ರನ್ಗಳನ್ನು ಗಳಿಸಿತು. ಬಳಿಕ ಬ್ಯಾಟ್ ಮಾಡಿದ ನ್ಯೂಝಿಲ್ಯಾಂಡ್ ಇನ್ನೂ 59 ಎಸೆತಗಳು ಇರುವಂತೆಯೇ 9 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತು.