ನಾಳೆ ಭಾರತಕ್ಕೆ ಪಾಕಿಸ್ತಾನ ಎದುರಾಳಿ | ತೀವ್ರ ಪೈಪೋಟಿ ನಿರೀಕ್ಷೆ
PC : PTI
ನ್ಯೂಯಾರ್ಕ್ : ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ರವಿವಾರ ನಡೆಯಲಿರುವ ಬಹುನಿರೀಕ್ಷಿತ ಟ್ವೆಂಟಿ20 ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಐರ್ಲ್ಯಾಂಡ್ ವಿರುದ್ಧ ಪಂದ್ಯವನ್ನು 8 ವಿಕೆಟ್ಗಳಿಂದ ಜಯಿಸಿ ಶುಭಾರಂಭ ಮಾಡಿದ ವಿಶ್ವಾಸದಲ್ಲಿದ್ದರೆ, ಬಾಬರ್ ಆಝಮ್ ನಾಯಕತ್ವದ ಪಾಕಿಸ್ತಾನ ತಂಡ ಅಮೆರಿಕದ ವಿರುದ್ಧ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಆಘಾತಕಾರಿ ಸೋಲುಂಡಿದೆ. ಇತ್ತೀಚೆಗಿನ ಫಾರ್ಮ್ ಅನ್ನು ಪರಿಗಣಿಸಿದರೆ ಭಾರತವು ಪಾಕಿಸ್ತಾನ ವಿರುದ್ಧ ಗೆಲ್ಲಬಲ್ಲ ಫೇವರಿಟ್ ತಂಡವಾಗಿದೆ. ಆದರೆ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ.
ಭಾರತ-ಪಾಕ್ ನಡುವಿನ ಪಂದ್ಯವು ಇತ್ತೀಚೆಗೆ ನಿರ್ಮಾಣಗೊಂಡಿರುವ 34,000 ಪ್ರೇಕ್ಷಕರ ಸಾಮರ್ಥ್ಯದ ನಾಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ರೇಕ್ಷಕರು ಕಿಕ್ಕಿರಿದು ಸೇರುವ ಸಾಧ್ಯತೆಯಿದೆ.
ಇಲ್ಲಿನ ಪಿಚ್ ಚರ್ಚೆಗೆ ಗ್ರಾಸವಾಗಿದ್ದು, ಪಿಚ್ನ ಗುಣಮಟ್ಟದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. 3 ಪಂದ್ಯಗಳಲ್ಲಿ ಎಲ್ಲ 6 ಇನಿಂಗ್ಸ್ಗಳಲ್ಲಿ ತಂಡಗಳು ಎರಡು ಬಾರಿ ಮಾತ್ರ 100ಕ್ಕಿಂತ ಹೆಚ್ಚು ರನ್ ಗಳಿಸಿವೆ. ಪಿಚ್ನಲ್ಲಿ ಅನಿರೀಕ್ಷಿತ ಬೌನ್ಸ್ ಪುಟಿದೇಳುತ್ತಿದ್ದು ಇದು ಹೊಡಿಬಡಿ ದಾಂಡಿಗರ ಸುರಕ್ಷತೆಯ ಬಗ್ಗೆ ಕಳವಳಪಡುವಂತೆ ಮಾಡಿದೆ. ರೋಹಿತ್ ಜೂ.5ರಂದು ನಡೆದ ಐರ್ಲ್ಯಾಂಡ್ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭುಜನೋವಿಗೆ ಒಳಗಾಗಿ 10ನೇ ಓವರ್ನ ಅಂತ್ಯಕ್ಕೆ ಕ್ರೀಸ್ ಅನ್ನು ತೊರೆದಿದ್ದರು.
ರೋಹಿತ್ ಔಟಾಗುವ ಮೊದಲು 37 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಭಾರತದ ಪಂದ್ಯದ ಬಳಿಕ ಪಿಚ್ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಸಿ , ಪಿಚ್ ನಾವು ನಿರೀಕ್ಷಿಸಿದ ರೀತಿಯಲ್ಲಿಲ್ಲ. ಇದಕ್ಕೆ ಪರಿಹಾರ ನೀಡಲು ಮೈದಾನದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಉಳಿದಿರುವ ಪಂದ್ಯಗಳಲ್ಲಿ ಉತ್ತಮ ಪಿಚ್ ಸಿದ್ಧಪಡಿಸಲಾಗುವುದು ಎಂದಿದೆ.
ಪಾಕಿಸ್ತಾನ ತಂಡ ಇನ್ನೂ ನಾಸ್ಸೌ ಕ್ರಿಕೆಟ್ ಸ್ಟೇಡಿಯಮ್ನ ವಾತಾವರಣಕ್ಕೆ ಹೊಂದಿಕೊಂಡಿಲ್ಲ. ಗುರುವಾರ ರಾತ್ರಿ ಟೂರ್ನಿಯ ಹೊಸ ತಂಡ ಅಮೆರಿಕದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ ಡಲ್ಲಾಸ್ನಿಂದ ನ್ಯೂಯಾರ್ಕ್ಗೆ ಆಗಮಿಸಿ ಶುಕ್ರವಾರ ವಿಶ್ರಾಂತಿ ಪಡೆದಿದೆ.
ಬಾಬರ್ ಬಳಗಕ್ಕೆ ಸವಾಲಿನ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳಲು ಸಮಯದ ಕೊರತೆ ಇದೆ. ಪ್ರಮುಖ ಪಂದ್ಯಕ್ಕಿಂತ ಮೊದಲು ಪಾಕ್ಗೆ ಇದು ಹಿನ್ನಡೆಯ ವಿಚಾರವಾಗಿದೆ. ಭಾರತ ವಿರುದ್ಧವೂ ಪಾಕಿಸ್ತಾನ ಸೋತರೆ ಪ್ರಸಕ್ತ ಟೂರ್ನಿಯಲ್ಲಿ ಸೂಪರ್-8 ಹಂತಕ್ಕೇರುವ ಹಾದಿ ಕಠಿಣವಾಗುವ ಸಾಧ್ಯತೆಯಿದೆ.
ಅಮೆರಿಕ ವಿರುದ್ಧ ಸೋಲಿಗೆ ಪಾಕ್ ಬೌಲರ್ಗಳು ಮಾತ್ರ ಹೊಣೆಯಲ್ಲ, ತಂಡದ ಪ್ರಮುಖ ಆಟಗಾರರ ಕಳಪೆ ಪ್ರದರ್ಶನವೂ ಕಾರಣವಾಗಿದೆ. ನಾಯಕ ಬಾಬರ್ 43 ರನ್ ಗಳಿಸಲು 44 ಎಸೆತ ಎದುರಿಸಿದ್ದರು. ರವಿವಾರದ ಪಂದ್ಯದಲ್ಲಿ ಶಾಹೀದ್ ಅಫ್ರಿದಿ ನೇತೃತ್ವದ ಪಾಕ್ ಬೌಲರ್ಗಳು ಭಾರತದ ಬ್ಯಾಟರ್ಗಳಿಗೆ ಸವಾಲಾಗಬಲ್ಲರು. ಮತ್ತೊಂದೆಡೆೆ ಜಸ್ಪ್ರೀತ್ ಬುಮ್ರಾ ಭಾರತದ ವೇಗದ ಬೌಲಿಂಗ್ ನೇತೃತ್ವವಹಿಸಿದ್ದಾರೆ.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಐರ್ಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಇರಲಿಲ್ಲ. ಇತ್ತೀಚೆಗಿನ ಪ್ರದರ್ಶನವನ್ನು ಗಮನಿಸಿ ಟೀಮ್ ಮ್ಯಾನೇಜ್ಮೆಂಟ್ ಕುಲದೀಪ್ಗೆ ಅವಕಾಶ ನೀಡಲು ಯೋಚಿಸುತ್ತಿದೆ. ಕುಲದೀಪ್ಗೆ ಅವಕಾಶ ನೀಡಿದರೆ ರವೀಂದ್ರ ಜಡೇಜ ಅಥವಾ ಅಕ್ಷರ್ ಪಟೇಲ್ ಸ್ಥಾನ ತೊರೆಯಬೇಕಾಗುತ್ತದೆ. ರಿಷಭ್ ಪಂತ್ 3ನೇ ಕ್ರಮಾಂಕದಲ್ಲಿ ಆಡಲಿದ್ದು, ರೋಹಿತ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ.
ಟೂರ್ನಮೆಂಟ್ ಆರಂಭಕ್ಕೆ ಮೊದಲು ಭಯೋತ್ಪಾದಕರಿಂದ ಬೆದರಿಕೆ ಬಂದಿರುವ ಕಾರಣ ಪ್ರತಿಷ್ಠಿತ ಸ್ಫರ್ಧಾವಳಿಯಲ್ಲಿ ಆಟಗಾರರ ಭದ್ರತೆಯನ್ನು ಖಾತ್ರಿ ಪಡಿಸಲು ಸ್ಥಳೀಯ ಅಧಿಕಾರಿಗಳು ಕಠಿಣ ಭದ್ರತೆಯನ್ನು ನಿಯೋಜಿಸಿದ್ದಾರೆ.
*ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರವಿವಾರ ನ್ಯೂಯಾರ್ಕ್ನಲ್ಲಿ ಮಳೆ ಬೀಳುವ ಎಲ್ಲ ಸಾಧ್ಯತೆಯಿದೆ. ಪಂದ್ಯ ಆರಂಭವಾಗಿ ಅರ್ಧಗಂಟೆಯ ನಂತರ(ಭಾರತದ ಕಾಲಮಾನ ರಾತ್ರಿ 8:30)ಮಳೆಯಾಗುವ ಸಾಧ್ಯತೆ ಎಂದು ಅಕ್ಯುವೆದರ್ ಮುನ್ಸೂಚನೆ ನೀಡಿದೆ. ಹಗಲು ವೇಳೆ ಪಂದ್ಯ ನಡೆಯುತ್ತಿರುವ ಕಾರಣ ಮಳೆಯಿಂದಾಗಿ ಪಂದ್ಯ ಆರಂಭ ವಿಳಂಬವಾದರೆ ಅಥವಾ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಹೆಚ್ಚುವರಿ ಸಮಯ ನೀಡುವ ಸಾಧ್ಯತೆಯಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದ್ದರೂ ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಡ್-ಟು-ಹೆಡ್
ಭಾರತ ಹಾಗೂ ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ 8 ಬಾರಿ ಸೆಣಸಾಡಿವೆ. ಈ ಪೈಕಿ ಭಾರತ ಒಂದು ಬಾರಿ ಸೋತಿದೆ. 2007ರ ಟಿ20 ವಿಶ್ವಕಪ್ನ ಲೀಗ್ ಹಂತದಲ್ಲಿ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿಯಾಗಿದ್ದವು. ಆಗ ಪಂದ್ಯ ಟೈಗೊಂಡ ಕಾರಣ ಭಾರತವು ಬೌಲ್-ಔಟ್ನಲ್ಲಿ ಜಯಶಾಲಿಯಾಗಿತ್ತು. ಫೈನಲ್ನಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಿದ್ದ ಭಾರತ 5 ರನ್ನಿಂದ ರೋಚಕ ಜಯ ಸಾಧಿಸಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು.
ಭಾರತ-ಪಾಕ್ 2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಕೊನೆಯ ಬಾರಿ ಆಡಿದ್ದವು. ಆಗ ವಿರಾಟ್ ಕೊಹ್ಲಿ ಅವರ ಅಮೋಘ ಇನಿಂಗ್ಸ್ ಬಲದಿಂದ ಭಾರತವು ಮೆಲ್ಬರ್ನ್ನಲ್ಲಿ ಜಯಭೇರಿ ಬಾರಿಸಿತ್ತು.
*ಟಿ20 ಪಂದ್ಯದಲ್ಲಿ ಹೆಡ್-ಟು-ಹೆಡ್
ಆಡಿರುವ ಪಂದ್ಯಗಳು: 12
ಭಾರತಕ್ಕೆ ಗೆಲುವು: 8
ಪಾಕಿಸ್ತಾನಕ್ಕೆ ಜಯ: 3
ಟೈ: 1(ಬೌಲ್-ಔಟ್ನಲ್ಲಿ ಭಾರತಕ್ಕೆ ಜಯ)
ಹಿಂದಿನ 5 ಟಿ20 ಪಂದ್ಯಗಳಲ್ಲಿ ಭಾರತ 3, ಪಾಕಿಸ್ತಾನ 2ರಲ್ಲಿ ಜಯ