ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿ ಜಯಿಸಿ ಇತಿಹಾಸ ನಿರ್ಮಿಸಿದ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡ
Photo: PCB
ಡುನೆಡಿನ್: ನ್ಯೂಝಿಲ್ಯಾಂಡ್ ವಿರುದ್ಧ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ 10 ರನ್ನಿಂದ ರೋಚಕ ಗೆಲುವು ದಾಖಲಿಸಿರುವ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡವು ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದೆ. ಐದು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡು ಪ್ರಮುಖ ಮೈಲಿಗಲ್ಲು ತಲುಪಿದೆ.
ಪಾಕಿಸ್ತಾನ ಮಹಿಳಾ ತಂಡವು ಇದೇ ಮೊದಲ ಬಾರಿ ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿಯನ್ನು ಗೆದ್ದುಕೊಂಡಿದೆ. 2018ರ ಅಕ್ಟೋಬರ್ ನಂತರ ವಿದೇಶಿ ನೆಲದಲ್ಲಿ ಮೊದಲ ಬಾರಿ ಟಿ-20 ಸರಣಿಯನ್ನು ಬಾಚಿಕೊಂಡಿದೆ.
ಆತಿಥೇಯ ತಂಡದಿಂದ ಬ್ಯಾಟಿಂಗ್ಗೆ ಇಳಿಸಲ್ಟಟ್ಟ್ಟ ಪಾಕಿಸ್ತಾನ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 137 ರನ್ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಮುನೀಬಾ ಅಲಿ(35 ರನ್), ಅಲಿಯಾ ರಿಯಾಝ್(ಔಟಾಗದೆ 32 ರನ್) ಹಾಗೂ ಮಾಜಿ ನಾಯಕಿ ಬಿಸ್ಮಾ ಮರೂಫ್(21 ರನ್)ಉತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವಿಗೆ ವೇದಿಕೆ ಒದಗಿಸಿದರು.
ಗೆಲ್ಲಲು 138 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಎಡಗೈ ಸ್ಪಿನ್ನರ್ ಸಾದಿಯಾ ಇಕ್ಬಾಲ್(2-29) ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಝಿಲ್ಯಾಂಡ್ನ ಬ್ಯಾಟರ್ಗಳಾದ ಬರ್ನಾಡಿನ್ ಬೆಝುಡೆನ್ಹೌಟ್(2 ರನ್)ಹಾಗೂ ಅಮೆಲಿಯಾ ಕೆರ್(2 ರನ್)ಅವರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಿದ ಸಾದಿಯಾ ಅವರು ಕಿವೀಸ್ಗೆ ಆರಂಭಿಕ ಆಘಾತ ನೀಡಿದರು. ಆತಿಥೇಯ ತಂಡ ರನ್ ಚೇಸ್ ವೇಳೆ 9 ರನ್ಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು.
ಫಾತಿಮಾ ಸನಾ(3-22) ಪಾಕ್ ಬೌಲರ್ಗಳ ಪೈಕಿ ಯಶಸ್ವಿ ಪ್ರದರ್ಶನ ನೀಡಿದರು. ತನ್ನ ಬೌಲಿಂಗ್ ಪ್ರಯತ್ನದ ಮೂಲಕ ಪಾಕಿಸ್ತಾನಿ ತಂಡವು ಶಿಸ್ತು ಹಾಗೂ ಕೌಶಲ್ಯವನ್ನು ಪ್ರದರ್ಶಿಸಿತು. ಈ ಮೂಲಕ ಸರಣಿ ಗೆದ್ದುಕೊಂಡಿತು. ಕಿವೀಸ್ ಪರ ಹನ್ನಾ ರೋವ್(33 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಆದರೆ ಇದು ನ್ಯೂಝಿಲ್ಯಾಂಡ್ ಗೆಲುವಿಗೆ ಸಾಕಾಗಲಿಲ್ಲ. ಜಾರ್ಜಿಯಾ ಪ್ಲಿಮ್ಮರ್ (28 ರನ್)ಸುಝಿ ಬೀಟ್ಸ್ (18 ರನ್) ಹಾಗೂ ಮ್ಯಾಡಿ ಗ್ರೀನ್(18 ರನ್)ಎರಡಂಕೆಯ ಸ್ಕೋರ್ ಗಳಿಸಿದರು.