ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಜಯಭೇರಿ
ಹೈದರಾಬಾದ್ ಅಂಗಳದಲ್ಲಿ 131 ಬಾರಿಸಿದ ರಿಝ್ವಾನ್
PHOTO : twitter.com/AatifNawaz
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಜಯ ಗಳಿಸಿದೆ.
ಶ್ರೀಲಂಕಾ ನೀಡಿದ ಸವಾಲಿನ 345 ರನ್ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಪಾಕ್ ಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ 12 ಹಾಗೂ ನಾಯಕ ಬಾಬರ್ ಅಝಂ 10 ರನ್ ಗೆ ಬೇಗ ವಿಕೆಟ್ ಕಳೆದುಕೊಂಡರೂ ಚೇತರಿಸಿಕೊಂಡ ಪಾಕಿಸ್ತಾನ, ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕ್ ಮತ್ತು ಮುಹಮ್ಮದ್ ರಿಝ್ವಾನ್ ಜೊತೆಯಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು. ಅಬ್ದುಲ್ಲಾ ಶಫೀಕ್ 103 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 113 ರನ್ ಸಿಡಿಸಿ ಮತಿಷ ಪತಿರಾಣ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು.
ಬಳಿಕ ತಂಡ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಂಡ ಮುಹಮ್ಮದ್ ರಿಝ್ವಾನ್ ಗಾಯದ ಮದ್ಯೆಯೂ ಶತಕ ಸಿಡಿಸಿ ಸಂಭ್ರಮಿಸಿದರು. 121 ಎಸೆತ ಎದುರಿಸಿದ ರಿಜ್ವಾನ್ 8 ಬೌಂಡರಿ 3 ಸಿಕ್ಸರ್ ನೆರವಿನಿಂದ 131 ರನ್ ಬಾರಿಸಿ ಪಾಕಿಸ್ತಾನ ತಂಡವನ್ನು ಅಜೇಯರಾಗಿ ಗೆಲುವಿನ ದಡ ಸೇರಿಸಿದರು. ಅವರಿಗೆ ಸೌದ್ ಶಕೀಲ್ 31 ಇಫ್ತಿಕಾರ್ 22 ಗಳಿಸಿ ಸಾಥ್ ನೀಡಿದರು.
ಭಾರತಕ್ಕೆ ಬಂದಿಳಿದ ನಂತರ ಪಾಕಿಸ್ತಾನತಂಡ ಹೈದರಾಬಾದ್ ಅಂಗಣದಲ್ಲೇ ಸತತ ಅಭ್ಯಾಸ ನಡೆಸಿತ್ತು. ವಿಶ್ವಕಪ್ ನ ಎರಡೂ ಪಂದ್ಯಗಳನ್ನು ಅಲ್ಲೇ ಆಡಿದ ಪಾಕಿಸ್ತಾನ ತಂಡ, ರಾಜೀವ್ ಗಾಂಧಿ ಸ್ಟೇಡಿಯಂ ಅನ್ನು ಚೆನ್ನಾಗಿ ಅರ್ಥೈಸಿರುವಂತೆ ತನ್ನ ಆಟ ಪ್ರದರ್ಶಿಸಿತು. ವಿಶ್ವಕಪ್ ನಲ್ಲಿ ಉತ್ತಮ ನಿರೀಕ್ಷೆಯಿದ್ದ ಬಾಬರ್ ಅಝಂ ಕಳೆದ ಬಾರಿ ಒಂದಂಕಿ ಗಳಿಸಿದ್ದರು. ಈ ಬಾರಿ ಅವರು 10 ರನ್ ಗಳಿಸಲಷ್ಟೇ ಶಕ್ತರಾದರು.
ಶ್ರೀಲಂಕಾ ಪರ ದಿಲ್ಶಾನ್ ಮದುಶಂಕ 2 ವಿಕೆಟ್ ಕಬಳಿಸಿದರೆ, ಮತಿಷ ಪತಿರಾಣ , ತೀಕ್ಷಣ ತಲಾ ಒಂದೊಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ ಎರಡು ಶತಕ ಸಹಿತ 344 ರನ್ ಬಾರಿಸಿತ್ತು. ಶ್ರೀಲಂಕಾ ಪರ ಆರಂಭಿಕ ಬ್ಯಾಟರ್ ಪತುಮ್ ನಿಸಂಕ ( 51 ) ಅರ್ಧಶತಕ ಬಾರಿಸಿದರೆ. ಕುಸಾಲ್ ಮೆಂಡಿಸ್ 77 ಎಸೆತಗಳಲ್ಲಿ 14 ಬೌಂಡರಿ 6 ಸಿಕ್ಸರ್ ಸಹಿತ 122 ರನ್ ಗಳಿಸಿದರೆ, ಇನ್ನೋರ್ವ ಬ್ಯಾಟರ್ ಸದೀರ ಸಮರವಿಕ್ರಮ 89 ಎಸೆತ ಎದುರಿಸಿ 11 ಬೌಂಡರಿ ಸಹಿತ 108 ರನ್ ಸಿಡಿಸಿದರು. ಧನಂಜಯ ಡಿಸಿಲ್ವ 25 ರನ್ ಬಾರಿಸಿದರು. ಪಾಕಿಸ್ತಾನ ಪರ ಹಸನ್ ಅಲಿ 10 ಓವರ್ ಗೆ 71 ರನ್ ನೀಡಿ 4 ವಿಕೆಟ್ ಪಡೆದರು.
ಹಾರಿಸ್ ರೌಫ್ 2 ವಿಕೆಟ್ ಪಡೆದರೆ, ಅಫ್ರಿದಿ, ನವಾಝ್, ಶಾದಬ್, ಇಫ್ತಿಕಾರ್ ತಲಾ ಒಂದು ವಿಕೆಟ್ ಪಡೆದರು.