ಭಾರತದ ವಿರುದ್ಧ ಸೋತರೂ ಪಾಕಿಸ್ತಾನದ ಸೆಮೀಸ್ ಆಸೆ ಜೀವಂತ

PC: x.com/CricketNDTV
ದುಬೈ: ಬದ್ಧ ಎದುರಾಳಿ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ-2025ರ ಸೆಮಿಫೈನಲ್ ತಲುಪುವ ಆಸೆಗಳು ಕ್ಷೀಣಿಸುತ್ತಿವೆ. ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಎ ಗುಂಪಿನ ಪಂದ್ಯದಲ್ಲಿ ಆರು ವಿಕೆಟ್ ಗಳ ಸುಲಭ ಜಯ ಸಾಧಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನಕ್ಕೆ ಇದು ಸತತ ಎರಡನೇ ಸೋಲಾಗಿದೆ.
ಮೊಹ್ಮದ್ ರಿಝ್ವಾನ್ ಬಳಗಕ್ಕೆ ಸೆಮಿಫೈನಲ್ ಹಾದಿ ಕಠಿಣವಾದರೂ, ಪಾಕಿಸ್ತಾನ ತಂಡದ ಸೆಮಿಫೈನಲ್ ಬಾಗಿಲು ಇನ್ನೂ ಸಂಪೂರ್ಣ ಮುಚ್ಚಿಲ್ಲ. ಬಾಂಗ್ಲಾದೇಶದ ವಿರುದ್ಧ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಜತೆಗೆ ತಂಡದ ಸಮಿಫೈನಲ್ ತಲುಪುವ ಅವಕಾಶ ನಾಕೌಟ್ ಹಂತದ ಇತರ ಫಲಿತಾಂಶಗಳನ್ನು ಆಧರಿಸಿದೆ.
ಒಂದು ವೇಳೆ ನ್ಯೂಝಿಲೆಂಡ್ ತಂಡ ಭಾರತ ಹಾಗೂ ಬಾಂಗ್ಲಾದೇಶ ಜತೆಗಿನ ಪಂದ್ಯಗಳನ್ನು ಸೋತಲ್ಲಿ, ನ್ಯೂಝಿಲೆಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂರು ಪಂದ್ಯಗಳಿಂದ ತಲಾ ಎರಡು ಅಂಕಗಳನ್ನು ಕಲೆ ಹಾಕಿದಂತಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿ ಅತ್ಯುತ್ತಮ ರನ್ ರೇಟ್ ಹೊಂದಿ ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಇರುತ್ತದೆ.
ಪಾಕಿಸ್ತಾನದ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ಎರಡು ಪಂದ್ಯಗಳಿಂದ ನಾಲ್ಕು ಅಂಕ ಕಲೆಹಾಕಿ ಈಗಾಗಲೇ ಸೆಮಿಫೈನಲ್ ತಲುಪಿದೆ.