ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ 100 ಬ್ಯಾಟರ್ಗಳನ್ನು ಔಟ್ ಮಾಡಿದ ಮೂರನೇ ವಿಕೆಟ್ಕೀಪರ್ ಪಂತ್
ರಿಷಭ್ ಪಂತ್ | PC : PTI
ಪರ್ತ್: ಭಾರತದ ಸ್ಟಾರ್ ಆಟಗಾರ ರಿಷಭ್ ಪಂತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(ಡಬ್ಲ್ಯುಟಿಸಿ)ಇತಿಹಾಸದಲ್ಲಿ 100 ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದ ಮೂರನೇ ವಿಕೆಟ್ಕೀಪರ್ ಎನಿಸಿಕೊಂಡು ವಿಶೇಷ ಕ್ಲಬ್ವೊಂದಕ್ಕೆ ಸೇರಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶನಿವಾರ ಪಂತ್ ಈ ಮೈಲಿಗಲ್ಲು ತಲುಪಿದರು.
ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಮಿಚೆಲ್ ಸ್ಟಾರ್ಕ್ ನೀಡಿದ ಕ್ಯಾಚ್ ಪಡೆದ 22ರ ಹರೆಯದ ಪಂತ್ ಮೂರಂಕೆಯನ್ನು ತಲುಪಿದರು.
ಈ ಮೈಲಿಗಲ್ಲು ಸವಾಲಿನ ಸನ್ನಿವೇಶದಲ್ಲಿ ಪಂತ್ ಅವರ ಸ್ಥಿರತೆ ಹಾಗೂ ವಿಕೆಟ್ ಹಿಂಬದಿ ಅವರ ಚಾಣಾಕ್ಷತನವನ್ನು ಬಿಂಬಿಸುತ್ತಿದೆ. ಪಂತ್ ಅವರು ಅಮೋಘ ಕ್ಯಾಚ್ಗಳು ಹಾಗೂ ಸ್ಟಂಪಿಂಗ್ಗಳ ಮೂಲಕ ಬ್ಯಾಟರ್ಗಳನ್ನು ಔಟ್ ಮಾಡಿದ್ದಾರೆ.
ಪಂತ್ಗಿಂತ ಮೊದಲು ಡಬ್ಲ್ಯುಟಿಸಿಯಲ್ಲಿ ಕೇವಲ ಇಬ್ಬರು ವಿಕೆಟ್ಕೀಪರ್ಗಳು ಈ ಮೈಲಿಗಲ್ಲು ತಲುಪಿದ್ದರು. ಆಸ್ಟ್ರೇಲಿಯದ ಅಲೆಕ್ಸ್ ಕ್ಯಾರಿ ಹಾಗೂ ವೆಸ್ಟ್ಇಂಡೀಸ್ನ ಜೋಶುವಾ ಡಿಸಿಲ್ವ ಈ ಸಾಧನೆ ಮಾಡಿದ್ದರು.
2ನೇ ದಿನದಾಟದಲ್ಲಿ ಜಸ್ಪ್ರಿತ್ ಬುಮ್ರಾ ಬೌಲಿಂಗ್ನಲ್ಲಿ ಕ್ಯಾರಿ ನೀಡಿದ ಕ್ಯಾಚ್ ಅನ್ನು ಪಡೆಯುವ ಮೂಲಕ ಪಂತ್ 99ನೇ ಅಟಗಾರರನ್ನು ಔಟ್ ಮಾಡಿದ್ದರು. ಪಂತ್ ಅವರು 30 ಪಂದ್ಯಗಳಲ್ಲಿ 87 ಕ್ಯಾಚ್ಗಳು ಹಾಗೂ 13 ಸ್ಟಂಪಿಂಗ್ ನಡೆಸಿದರು.
► ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ವಿಕೆಟ್ಕೀಪರ್ಗಳ ಶ್ರೇಷ್ಠ ಪ್ರದರ್ಶನ
ಅಲೆಕ್ಸ್ ಕ್ಯಾರಿ(ಆಸ್ಟ್ರೇಲಿಯ): 137(125 ಕ್ಯಾಚ್, 12 ಸ್ಟಂಪಿಂಗ್)
ಜೋಶುವಾ ಡಿಸಿಲ್ವ(ವೆಸ್ಟ್ಇಂಡೀಸ್) 108(103 ಕ್ಯಾಚ್, 5 ಸ್ಟಂಪಿಂಗ್)
ರಿಷಭ್ ಪಂತ್(ಭಾರತ) 100(87 ಕ್ಯಾಚ್, 13 ಸ್ಟಂಪಿಂಗ್)
ಟಾಮ್ ಬ್ಲಂಡೆಲ್(ನ್ಯೂಝಿಲ್ಯಾಂಡ್)90(78 ಕ್ಯಾಚ್,12 ಸ್ಟಂಪಿಂಗ್)
ಮುಹಮ್ಮದ್ ರಿಝ್ವಾನ್(ಪಾಕಿಸ್ತಾನ)87(80 ಕ್ಯಾಚ್ಗಳು, 7 ಸ್ಟಂಪಿಂಗ್)