ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೆ ಭಾರತದಿಂದ 84 ಅಥ್ಲೀಟ್ ಗಳು, 95 ಅಧಿಕಾರಿಗಳು!
Photo : Twitter
ಹೊಸದಿಲ್ಲಿ : ಆಗಸ್ಟ್ 28ರಂದು ಪ್ಯಾರಿಸ್ ನಲ್ಲಿ ಆರಂಭಗೊಳ್ಳುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದಿಂದ 84 ಅತ್ಲೀಟ್ಗಳು ಸ್ಪರ್ಧಿಸಲಿದ್ದಾರೆ. ಅವರ ಜೊತೆಗೆ, ತಂಡದ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಅತ್ಲೀಟ್ಗಳ ವಿಶೇಷ ಅಗತ್ಯಗಳನ್ನು ನೋಡಿಕೊಳ್ಳುವ ಸಹಾಯಕ ಸಿಬ್ಬಂದಿ ಸೇರಿದಂತೆ 95 ಮಂದಿ ಪ್ಯಾರಿಸ್ ಗೆ ಪ್ರಯಾಣಿಸಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ಗೆ ಹೋಗುತ್ತಿರುವ ಭಾರತೀಯ ತಂಡವು ಈವರೆಗಿನ ಭಾರತದ ಅತಿ ದೊಡ್ಡ ತಂಡವಾಗಿದೆ. ಈ ಬಾರಿ ಭಾರತೀಯ ತಂಡದಲ್ಲಿ 179 ಸದಸ್ಯರಿದ್ದಾರೆ.
84 ಅತ್ಲೀಟ್ಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. 2021ರಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ 54 ಅತ್ಲೀಟ್ಗಳು 9 ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ.
ಈ ಬಾರಿ ಪ್ಯಾರಾಲಿಂಪಿಕ್ಸ್ಗೆ ಅತ್ಲೀಟ್ಗಳ ಜೊತೆಗೆ ತೆರಳುತ್ತಿರುವ 95 ಮಂದಿಯ ಪೈಕಿ 77 ಮಂದಿ ತಂಡದ ಅಧಿಕಾರಿಗಳು, ಒಂಭತ್ತು ಮಂದಿ ತುರ್ತು ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಒಂಭತ್ತು ಮಂದಿ ತುರ್ತು ಪರಿಸ್ಥಿತಿ ನಿಭಾಯಿಸುವ ಅಧಿಕಾರಿಗಳು.
‘‘ಕೆಲವು ಪ್ಯಾರಾ ಅತ್ಲೀಟ್ಗಳ ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಂಡಕ್ಕೆ ವೈಯಕ್ತಿಕ ಕೋಚ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಆದಾಗ್ಯೂ, ಶೆಫ್ ಡಿ ಮಿಶನ್ (ತಂಡದ ಪ್ರಧಾನ ಕೋಚ್)ರ ಸೂಚನೆಗಳಂತೆ ಅವರು ಇತರ ಅತ್ಲೀಟ್ಗಳಿಗೂ ಅಗತ್ಯ ಸೇವೆಗಳನ್ನು ನೀಡುತ್ತಾರೆ’’ ಎಂದು ಕ್ರೀಡಾ ಸಚಿವಾಲಯವು ತಿಳಿಸಿದೆ.
‘‘ಶೆಫ್ ಡಿ ಮಿಶನ್ ಮತ್ತು ಪ್ಯಾರಾ ಬ್ಯಾಡ್ಮಿಂಟನ್ನ ಓರ್ವ ತಂಡ ಮ್ಯಾನೇಜರ್ನ್ನು ಹೊರತುಪಡಿಸಿ, ಇಡೀ ತಂಡದ ವೆಚ್ಚವನ್ನು ಸರಕಾರ ಭರಿಸುತ್ತದೆ’’ ಎಂದು ಅದು ಹೇಳಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ಮತ್ತು ಶೂಟರ್ ಅವನಿ ಲೇಖರ ಸೇರಿದಂತೆ ಉನ್ನತ ದರ್ಜೆಯ ಅತ್ಲೀಟ್ಗಳಿಗೆ ವೈಯಕ್ತಿಕ ಕೋಚ್ಗಳನ್ನು ಒದಗಿಸಲಾಗಿದೆ.
‘‘ಯಾವುದೇ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅತ್ಲೀಟ್ಗಳಿಗೆ, ಸಮರ್ಥ ದೇಹದ ಅತ್ಲೀಟ್ಗಳಿಗಿಂತಲೂ ಹೆಚ್ಚಿನ ವೈಯಕ್ತಿಕ ಕೋಚ್ಗಳು ಮತ್ತು ಪರಿಚಾರಕರು ಬೇಕಾಗುತ್ತಾರೆ. ಹಾಗಾಗಿ, ಪ್ಯಾರಾ ಕ್ರಿಡಾಕೂಟಗಳಲ್ಲಿ ಹೆಚ್ಚು ಸಹಾಯಕ ಸಿಬ್ಬಂದಿಯನ್ನು ಹೊಂದುವುದು ಹೊಸತೇನಲ್ಲ’’ ಎಂದು ತಂಡದ ಅಧಿಕಾರಿಯೊಬ್ಬರು ಹೇಳಿದರು.