ಪ್ಯಾರಿಸ್ ಒಲಿಂಪಿಕ್ಸ್ - 2024 | ಚಿನ್ನಕ್ಕಾಗಿ ಸ್ಪರ್ಧಿಸಿದ್ದ ತುಂಬು ಗರ್ಭಿಣಿ ಈಜಿಪ್ಟ್ನ ಕ್ರೀಡಾಪಟು ನದಾ ಹಫೀಝ್!
ನದಾ ಹಫೀಝ್ | PC : Olympics.com
ಪ್ಯಾರಿಸ್: ರಾಜ-ಮಹಾರಾಜರ ಕಾಲದಲ್ಲಿ ಕತ್ತಿವರಸೆ ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಭಾರತದಲ್ಲಂತೂ ಮಹಿಳೆಯರೂ ಕತ್ತಿ ಹಿಡಿದು ದೇಶಕ್ಕಾಗಿ ಹೋರಾಡಿದ ವೀರೋಚಿತ ಕತೆಗಳಿವೆ. ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮಿಬಾಯಿಯಂತಹ ರಾಣಿಯರು ಕತ್ತಿ ಹಿಡಿದೇ ತಮ್ಮ ನಾಡುಗಳನ್ನು ರಕ್ಷಿಸಿಕೊಂಡವರು. ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯಂತೂ ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಬ್ರಿಟಿಷರ ವಿರುದ್ಧ ಹೋರಾಡಿದ ವೀರಾ ರಾಣಿ.
ಆದರೆ, ರಾಜ-ಮಹಾರಾಜರ ಕಾಲ ಅಳಿದ ನಂತರ ಕತ್ತಿ ವರಸೆ ಕ್ರೀಡೆಯ ರೂಪ ತಾಳಿದೆ. ಒಲಿಂಪಿಕ್ಸ್ ನಲ್ಲಿ ಈ ಕ್ರೀಡೆಗೆ ತನ್ನದೇ ಆದ ಮೆರುಗಿದೆ. ಅತ್ಯಂತ ಸೂಕ್ಷ್ಮ, ಸಂಕೀರ್ಣ ಹಾಗೂ ಸವಾಲಿನ ಈ ಕ್ರೀಡೆಯಲ್ಲಿ ಪುರುಷರಿಗೆ ಪೈಪೋಟಿ ನೀಡುವಂತೆ ಮಹಿಳೆಯರೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಕತ್ತಿ ವರಸೆ ಕ್ರೀಡೆಯು ಈಜಿಪ್ಟ್ ಆಟಗಾರ್ತಿಯಿಂದ ವಿಶಿಷ್ಟ ರಂಗು ಪಡೆದುಕೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ ತಮ್ಮ ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ರಣರಂಗದಲ್ಲಿ ಹೋರಾಡುವ ಮೂಲಕ ಅಗ್ರ ವೀರಾ ರಾಣಿ ಎಂಬ ಹಿರಿಮೆಗೆ ಭಾಜನವಾಗಿದ್ದರೆ, ಈಜಿಪ್ಟ್ ನ ನದಾ ಹಫೀಝ್ ತಮ್ಮ ಮಗುವನ್ನು ಗರ್ಭದಲ್ಲಿಟ್ಟುಕೊಂಡು ಚಿನ್ನದ ಪದಕಕ್ಕಾಗಿ ಹೋರಾಡುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನದಾ ಹಫೀಝ್ ಜಾಗತಿಕ ಗಮನ ಸೆಳೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅವರು, ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ: “ನಿಮಗೆ ಅಖಾಡದಲ್ಲಿ ಕಾಣಿಸಲಿರುವುದು ಇಬ್ಬರು ಆಟಗಾರರಲ್ಲ; ಬದಲಿಗೆ ಮೂವರು. ಅದು ನಾನು, ನನ್ನ ಪ್ರತಿಸ್ಪರ್ಧಿ ಹಾಗೂ ಇನ್ನಷ್ಟೇ ಪ್ರಪಂಚಕ್ಕೆ ಬರಬೇಕಿರುವ ನನ್ನ ಮಗು!” ಎಂದು ಹೇಳಿಕೊಂಡಿದ್ದಾರೆ.
ಗರ್ಭಧಾರಿಣಿಯಾಗಿ ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧಿಸುವಾಗ ತಾನು ಎದುರಿಸಿದ ಸವಾಲುಗಳ ಕುರಿತೂ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಅದು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ನಾನು ಮತ್ತು ನನ್ನ ಮಗು ಇಬ್ಬರೂ ಸಮಾನವಾಗಿ ಸವಾಲುಗಳನ್ನು ಹಂಚಿಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದಾರೆ. “ಗರ್ಭಧಾರಣೆಯ ಸಂಭ್ರಮ ತನಗೆ ತಾನೇ ಕಠಿಣವಾಗಿದ್ದರೂ, ಜೀವನ ಹಾಗೂ ಕ್ರೀಡೆಯಲ್ಲಿ ಸಮತೋಲನ ಸಾಧಿಸಲು ಹೋರಾಟ ನಡೆಸುವುದೂ ಅನಿವಾರ್ಯ. ಹೀಗಿದ್ದೂ ಇದು ಬೆಲೆ ಬಾಳುವ ಸಂಗತಿಯೂ ಆಗಿದೆ” ಎಂದೂ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ, ತಾನು 16ನೇ ಸುತ್ತಿಗೆ ಅರ್ಹತೆ ಗಿಟ್ಟಿಸಿರುವ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಿದ್ದಾರೆ.
ಕತ್ತಿ ವರಸೆ ಚುರುಕುತನ, ನಾಜೂಕು ಹಾಗೂ ದೈಹಿಕ ಸಾಮರ್ಥ್ಯವನ್ನು ಬಯಸುವ ಕ್ರೀಡೆಯಾಗಿದೆ. ಇಂತಹ ಕ್ರೀಡೆಯಲ್ಲಿ ನದಾ ಹಫೀಝ್ ಗೆ ಶುಭವಾಗಲೆಂದು ಎಲ್ಲ ಕ್ರೀಡಾ ಪ್ರೇಮಿಗಳು ಹಾರೈಸುತ್ತಿದ್ದಾರೆ.