ಪ್ಯಾರಿಸ್ ಒಲಿಂಪಿಕ್ಸ್ | ಬೆಳ್ಳಿ ವಿಜೇತ ಹಿ ಬಿಂಗ್ ಜಿಯಾವೊ ಬ್ಯಾಡ್ಮಿಂಟನ್ ಗೆ ವಿದಾಯ
ಬಿಂಗ್ ಜಿಯಾವೊ | PC : Olympics.com
ಬೀಜಿಂಗ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ ಚೀನಾದ ಶಟ್ಲರ್ ಹಿ ಬಿಂಗ್ ಜಿಯಾವೊ ಮಂಗಳವಾರ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡೆಯಿಂದ ನಿವೃತ್ತಿಯಾಗಿದ್ದಾರೆ.
ಆದರೆ 27ರ ಹರೆಯದ ಜಿಯಾವೊ ದೇಶೀಯ ಟೂರ್ನಮೆಂಟ್ ಗಳಲ್ಲಿ ಆಡುವುದನ್ನು ಮುಂದುವರಿಯಲಿದ್ದಾರೆ.
ಭಾರತದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರನ್ನು ಅಂತಿಮ-16ರ ಸುತ್ತಿನಲ್ಲಿ ಸೋಲಿಸಿದ್ದ ಬಿಂಗ್ ಜಿಯವೊ ಫೈನಲ್ ಗೆ ತಲುಪಿದ್ದರೂ ದಕ್ಷಿಣ ಕೊರಿಯಾದ ವಿಶ್ವದ ನಂ.1 ಆಟಗಾರ್ತಿ ಆನ್ ಸೆ ಯಂಗ್ ವಿರುದ್ಧ ಸೋತಿದ್ದರು.
ಬಿಂಗ್ ಜಿಯಾವೊ 2021ರಲ್ಲಿ ನಡೆದಿದ್ದ ಟೋಕಿಯೊ ಗೇಮ್ಸ್ನಲ್ಲಿ ಸಿಂಧು ವಿರುದ್ಧ ಸೋಲನುಭವಿಸಿ ಕಂಚಿನ ಪದಕದಿಂದ ವಂಚಿತರಾಗಿದ್ದರು. ಆದರೆ ಪ್ಯಾರಿಸ್ ನಲ್ಲಿ ಸೆ ಯಂಗ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದ್ದಾರೆ.
2014ರಲ್ಲಿ ಬಿ ಡಬ್ಲ್ಯು ಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಜಪಾನ್ ನ ಅಕಾನೆ ಯಮಗುಚಿ ನಂತರ ರನ್ನರ್ಸ್ ಅಪ್ ಆಗಿದ್ದ ಬಿಂಗ್ ಜಿಯಾವೊ ಬೆಳಕಿಗೆ ಬಂದಿದ್ದರು. ಅದೇ ವರ್ಷ ಚೀನಾದಲ್ಲೇ ನಡೆದಿದ್ದ ಯೂತ್ ಒಲಿಂಪಿಕ್ ಗೇಮ್ಸ್ನ ಫೈನಲ್ ನಲ್ಲಿ ಯಮಗುಚಿ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದರು.
ಎಡಗೈ ಶಟ್ಲರ್ 461 ಸಿಂಗಲ್ಸ್ ಪಂದ್ಯಗಳಲ್ಲಿ 336ರಲ್ಲಿ ಗೆಲುವು ಹಾಗೂ 125ರಲ್ಲಿ ಸೋತಿದ್ದಾರೆ.