ಪ್ಯಾರಿಸ್ ಒಲಿಂಪಿಕ್ಸ್ | ತೀವ್ರ ಚರ್ಚೆಗೊಳಗಾದ ವಿವಾದಗಳು
ವಿನೇಶ್ ಫೋಗಟ್ ರಿಂದ ಇಮಾನ್ ಖಲೀಫ್ ವರೆಗೆ…
ವಿನೇಶ್ ಫೋಗಟ್, ಇಮಾನ್ ಖಲೀಫ್ | PC : PTI
ಪ್ಯಾರಿಸ್ : ರವಿವಾರ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ಕೆಲವು ಶ್ರೇಷ್ಠ ಸಾಧನೆಗಳ ಜೊತೆಗೆ ಹಲವು ವಿವಾದಗಳು ಮತ್ತು ಸಂಘರ್ಷಗಳಿಗೂ ಸಾಕ್ಷಿಯಾಯಿತು. ಫಲಿತಾಂಶದಲ್ಲಿ ಬದಲಾವಣೆಯಾಯಿತು, ಪದಕಗಳನ್ನು ವಾಪಸ್ ಪಡೆದುಕೊಳ್ಳಲಾಯಿತು, ಅಥ್ಲೀಟ್ ಗಳನ್ನು ಮನೆಗೆ ಕಳುಹಿಸಲಾಯಿತು ಮತ್ತು ಕೆಲವು ಘಟನೆಗಳ ಬಗ್ಗೆ ಸಾಮಾಜಿಕ ಮತ್ತು ಜಾಗತಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗಳಾದವು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ವಿನೇಶ್ ಫೋಗಟ್ರಿಂದ ಹಿಡಿದು ಇಮಾನ್ ಖಲೀಫ್ ವರೆಗಿನ ಕೆಲವು ವಿವಾದಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
►ಇಮಾನ್ ಖಲೀಫ್ ಮತ್ತು ಲಿನ್ ಯು-ಟಿಂಗ್ ಅವರನ್ನೊಳಗೊಂಡ ಲಿಂಗ ವಿವಾದ
PC: PTI
ಅಲ್ಜೀರಿಯದ ಮಹಿಳಾ ಬಾಕ್ಸರ್ ಇಮಾನ್ ಖಲೀಫ್ ಮತ್ತು ತೈವಾನ್ನ ಮಹಿಳಾ ಬಾಕ್ಸರ್ ಲಿನ್ ಯು-ಟಿಂಗ್ ಇಬ್ಬರೂ ತಮ್ಮ ವಿಭಾಗಗಳಲ್ಲಿ ಚಿನ್ನ ಗೆದ್ದರು. ಆದರೆ, ಅಲ್ಲಿ ವಿವಾದಗಳು ತಲೆದೋರಿದವು. ಅವರ ದೇಹದಲ್ಲಿ ‘ಎಕ್ಸ್ ವೈ’ ಕ್ರೋಮೋಸೋಮ್ಗಳು ಇರುವುದು ವಿವಾದಕ್ಕೆ ಕಾರಣವಾಯಿತು.
ಸಾಮಾನ್ಯವಾಗಿ, ಪುರುಷರ ಜೀವಕೋಶದಲ್ಲಿ ಎಕ್ಸ್ ವೈ ಕ್ರೋಮೋಸೋಮ್ಗಳಿದ್ದರೆ, ಮಹಿಳೆಯರ ಜೀವಕೋಶದಲ್ಲಿ ಎಕ್ಸ್ ಎಕ್ಸ್ ಕ್ರೋಮೋಸೋಮ್ಗಳಿರುತ್ತವೆ.
ಅವರ ಜೀವಕೋಶದಲ್ಲಿ ಎಕ್ಸ್ ವೈ ಕ್ರೋಮೋಸೋಮ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಅವರು ‘‘ಗಂಡು’’ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಖಲೀಫ್ ಮತ್ತು ಲಿನ್ ಇಬ್ಬರನ್ನೂ 2023ರ ಬಾಕ್ಸಿಂಗ್ ವಿಶ್ವಚಾಂಪಿಯನ್ ಶಿಪ್ಸ್ ನಿಂದ ಅನರ್ಹಗೊಳಿಸಲಾಗಿತ್ತು. ಆದರೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು.
ಖಲೀಫ್ ಮತ್ತು ಲಿನ್ ಇಬ್ಬರೂ ಜೈವಿಕವಾಗಿ ಹೆಣ್ಣಾಗಿ ಹುಟ್ಟಿದ ಹೊರತಾಗಿಯೂ ಅವರ ವಿರುದ್ಧ ಆರೋಪಗಳು, ಕುಹಕಗಳು ಹರಿದಾಡಿದವು.
►ವಿನೇಶ್ ಫೋಗಟ್ ಅನರ್ಹತೆ
PC : PTI
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ವಿನೇಶ್ ಫೋಗಟ್ ಫೈನಲ್ ಗೆ ಸಾಗುವ ಮೂಲಕ ಅಸಾಧಾರಣ ಪ್ರದರ್ಶನವನ್ನು ನೀಡಿದರು. ಪ್ರಿಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ನಡೆದ ದಿನ ಅವರ ತೂಕ ಸರಿಯಾಗಿತ್ತು. ಅಂದು ಅವರು ಎಲ್ಲಾ ಮೂರು ಸ್ಪರ್ಧೆಗಳಲ್ಲಿ ಜಯ ಗಳಿಸಿ ಪೈನಲ್ ತಲುಪಿದರು. ಆದರೆ, ಮಾರನೇ ದಿನದ ಫೈನಲ್ಗೆ ಮುನ್ನ ಅವರನ್ನು ತೂಗಿದಾಗ ಅವರ ತೂಕ 50 ಕೆಜಿಗಿಂತ 100 ಗ್ರಾಮ್ ಹೆಚ್ಚಾಗಿತ್ತು. ಹಾಗಾಗಿ, ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಅವರಿಗೆ ಫೈನಲ್ ನಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಯಿತು ಮತ್ತು ಅವರ ಪದಕವನ್ನು ಕಿತ್ತುಕೊಳ್ಳಲಾಯಿತು.
ಅವರ ಪ್ರಕರಣ ಈಗ ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿದೆ. ಅವರಿಗೆ ಬೆಳ್ಳಿ ಪದಕ ನೀಡಬಹುದೇ ಎಂಬ ಬಗ್ಗೆ ನ್ಯಾಯಾಲಯವು ಇನ್ನಷ್ಟೇ ತೀರ್ಪು ನೀಡಬೇಕಾಗಿದೆ.
►ಟಾಮ್ ಕ್ರೇಗ್ ರ ಕೊಕೇನ್ ವಿವಾದ
PC : NDTV
ಆಸ್ಟ್ರೇಲಿಯದ ಹಾಕಿ ಆಟಗಾರ ಟಾಮ್ ಕ್ರೇಗ್ ರನ್ನು ಪ್ಯಾರಿಸ್ನಲ್ಲಿ ಕೊಕೇನ್ ಖರೀದಿಸಲು ಪ್ರಯತ್ನಿಸಿದ ಆರೋಪದಲ್ಲಿ ಬಂಧಿಸಲಾಯಿತು. ಆದರೆ, ಎಚ್ಚರಿಕೆಯಾಗಿ ಅವರ ಮಣಿಕಟ್ಟಿಗೆ ಒಂದು ಪೆಟ್ಟು ಕೊಟ್ಟು ಬಿಟ್ಟುಬಿಡಲಾಯಿತು. ಅವರ ವಿರುದ್ಧ ಮೊಕದ್ದಮೆ ದಾಖಲಾಗಲಿಲ್ಲ. ಅವರನ್ನು ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿಯ ಹಾಕಿ ಚಟುವಟಿಕೆಗಳಿಂದ ಬಿಡುಗಡೆಗೊಳಿಸಲಾಯಿತು.
►ಕಂಚು ಕಳೆದುಕೊಂಡ ಜೋರ್ಡಾನ್ ಚೈಲಿಸ್
ಅಮೆರಿಕದ ಜಿಮ್ನಾಸ್ಟ್ ಜೋರ್ಡಾನ್ ಚೈಲಿಸ್ರ ಅಂಕಕ್ಕೆ 0.1 ಅಂಕ ಸೇರಿಸುವಂತೆ ಕೋರಿ ಅವರ ಕೋಚ್ ಸೆಸಿಲಿ ಲ್ಯಾಂಡಿ ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ಗೆಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಸ್ವೀಕರಿಸಲಾಯಿತು ಹಾಗೂ ಅವರಿಗೆ 0.1 ಅಂಕ ನೀಡಲಾಯಿತು. ಹಾಗಾಗಿ, ಚೈಲಿಸ್ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ನೆಗೆದು ಕಂಚು ಪಡೆದರು.
ಆದರೆ, ಮಧ್ಯಪ್ರವೇಶಿಸಿದ ಕ್ರೀಡಾ ಪಂಚಾಯಿತಿ ನ್ಯಾಯಾಲಯ, ಲ್ಯಾಂಡಿ ನಿಗದಿತ ಅವಧಿಗಿಂತ 64 ಸೆಕೆಂಡ್ ವಿಳಂಬವಾಗಿ ಮನವಿ ಸಲ್ಲಿಸಿದರು ಎಂದು ಹೇಳಿ ಅವರ ಪದಕವನ್ನು ಕಿತ್ತುಕೊಂಡು ಮೂಲ ಒಡತಿಗೆ ನೀಡಿತು.
►ಪರಾಗ್ವೆ ಈಜುಗಾರ್ತಿಯನ್ನು ‘‘ಹೊರಹಾಕಿದ’’ ಪ್ರಕರಣ
PC :Olympics.com
‘‘ಅನುಚಿತ ವರ್ತನೆ’’ಗಾಗಿ ಪರಾಗ್ವೆ ಈಜುಗಾರ್ತಿ ಲೋನಾ ಅಲೋನ್ಸೊರನ್ನು ಶಿಬಿರ ತೊರೆಯುವಂತೆ ಸೂಚಿಸಲಾಯಿತು ಎನ್ನಲಾಗಿದೆ. ಆದರೆ, ಬಳಿಕ ಈ ವರದಿಗಳನ್ನು ಅಲ್ಲಗಳೆದ ಅಲೋನ್ಸೊ, ತನ್ನನ್ನು ಶಿಬಿರದಿಂದ ಹೊರಹಾಕಲಾಗಿಲ್ಲ ಎಂದು ಹೇಳಿದರು. ತನಗೆ ಬ್ರೆಝಿಲ್ ಫುಟ್ಬಾಲ್ ಆಟಗಾರ ನೇಮರ್ ಸಂದೇಶ ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ಅವರು ಮತ್ತಷ್ಟು ಸುದ್ದಿಗೆ ಗ್ರಾಸವಾದರು.