ಪ್ಯಾರಿಸ್ ಒಲಿಂಪಿಕ್ಸ್: ಅತ್ಲೀಟ್ ಗಳ ಕ್ರೀಡಾಗ್ರಾಮ ಅಧಿಕೃತ ಉದ್ಘಾಟನೆ
ಆಸ್ಟ್ರೇಲಿಯ ,ಬ್ರೆಝಿಲ್ ಕ್ರೀಡಾಪಟುಗಳ ಆಗಮನ
PC : olympics.com
ಪ್ಯಾರಿಸ್: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಗಳಿಗಾಗಿ ಕ್ರೀಡಾಪಟುಗಳು ಫ್ರಾನ್ಸ್ ರಾಜಧಾನಿಗೆ ಗುರುವಾರ ಆಗಮಿಸುವ ಮೂಲಕ ವಸತಿ ವ್ಯವಸ್ಥೆ ಹೊಂದಿರುವ ಕ್ರೀಡಾಗ್ರಾಮ ಅಧಿಕೃತವಾಗಿ ಕ್ರೀಡಾಳುಗಳಿಗೆ ತೆರೆದುಕೊಂಡಿದೆ.
ಪ್ಯಾರಿಸ್ ನ ಉತ್ತರ ಭಾಗದಲ್ಲಿ ಕ್ರೀಡಾಗ್ರಾಮ ನಿರ್ಮಿಸಲಾಗಿದ್ದು, ಇದು ಗರಿಷ್ಠ 14,500 ಮಂದಿಗೆ ಅತಿಥ್ಯವಹಿಸಲು ಸಿದ್ಧವಾಗಿದೆ.
ಆಸ್ಟ್ರೇಲಿಯ ಹಾಗೂ ಬ್ರೆಝಿಲ್ ತಮ್ಮ ತಂಡದ ಸದಸ್ಯರನ್ನು ಕ್ರೀಡಾಗ್ರಾಮಕ್ಕೆ ಕಳುಹಿಸಿಕೊಟ್ಟ ಮೊದಲ ದೇಶಗಳಾಗಿವೆ. ಒಲಿಂಪಿಕ್ ಗೇಮ್ಸ್ ಉದ್ಘಾಟನ ಸಮಾರಂಭ ಆರಂಭವಾಗುವ ಒಂದು ವಾರದ ಮೊದಲೇ ಕ್ರೀಡಾಪಟುಗಳ ಆಗಮನ ಶುರುವಾಗಿದೆ.
ಮನೆಯಿಂದ ದೂರ ಉಳಿಯಲಿರುವ ಕ್ರೀಡಾಪಟುಗಳಿಗೆ ಮನೆಯಾಗಿ ಕಾರ್ಯನಿರ್ವಹಿಸುವ ಕ್ರೀಡಾಗ್ರಾಮವು ಕ್ರೀಡಾಪಟುಗಳಿಗೆ ವಿಶ್ರಾಂತಿ ಹಾಗೂ ಅವರ ಸ್ಪರ್ಧೆಗಳಿಗೆ ತಯಾರಿ ಮಾಡಲು ಆರಾಮದಾಯಕ ಹಾಗೂ ಸುರಕ್ಷಿತ ವಾತಾವರಣ ಒದಗಿಸುತ್ತದೆ.
ನಾವು ಸಿದ್ದರಿದ್ದೇವೆ ಎಂದು ಕ್ರೀಡಾಗ್ರಾಮದ ಉಪ ಮುಖ್ಯಸ್ಥ ಆಗಸ್ಟಿನ್ ಟ್ರಾನ್ ವ್ಯಾನ್ ಫ್ರೆಂಚ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಒಲಿಂಪಿಕ್ಸ್ ವಿಲೇಜ್, ಕ್ರೀಡಾಕೂಟ ಸಂಘಟಕರಿಗೆ ಹೆಮ್ಮೆಗೆ ಕಾರಣವಾಗಿದ್ದು, ಇದು ಒಂದು ವಿಶಿಷ್ಟ ವೈಶಿಷ್ಟವನ್ನು ಹೊಂದಿದೆ. ಗ್ರಾಮದ ನಿವಾಸಿಗಳಿಗೆ ಅರಾಮದಾಯಕವಾದ ತಾಪಮಾನ ನಿರ್ವಹಿಸಲು ಹವಾನಿಯಂತ್ರಣವನ್ನು ಅವಲಂಬಿಸಿಲ್ಲ. ಬೇಸಿಗೆಯ ಸಮಯದಲ್ಲಿ ಹೊರಭಾಗಕ್ಕಿಂತ ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ತಂಪಾಗಿರುವಂತೆ ಗ್ರಾಮದ ಒಳಭಾಗವನ್ನು ವಿನ್ಯಾಸಗೊಳಿಸಲಾಗಿದೆ.
ಜುಲೈ 26ರಿಂದ ಸೆಪ್ಟಂಬರ್ 8ರ ತನಕ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳ ಮುಕ್ತಾಯದ ನಂತರ ಒಲಿಂಪಿಕ್ಸ್ ವಿಲೇಜ್ ಒಳಗಿನ ಅಪಾರ್ಟ್ಮೆಂಟ್ಗಳನ್ನು ವಸತಿಗಳಾಗಿ ಪರಿವರ್ತಿಸಲಾಗುತ್ತದೆ. ಕನಿಷ್ಠ ಮೂರನೇ ಒಂದು ಭಾಗವನ್ನು ಸಾರ್ವಜನಿಕ ವಸತಿ ಉದ್ದೇಶಗಳಿಗಾಗಿ ಮೀಸಲಿಡಲಾಗುತ್ತದೆ.