ಪ್ಯಾರಿಸ್ ಒಲಿಂಪಿಕ್ಸ್ | ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿ ವಜಾಗೊಳಿಸಿದ ಸಿಎಎಸ್
ಭಾರತೀಯರ ಮತ್ತೊಂದು ಪದಕದ ಕನಸು ಭಗ್ನ
ವಿನೇಶ್ ಫೋಗಟ್ | PC : PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತನ್ನ ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯನ್ನು ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್)ಬುಧವಾರ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತೀಯರಿಗೆ ಭಾರೀ ನಿರಾಸೆಯಾಗಿದೆ.
ಜಪಾನ್ನ ಯುಯಿ ಸುಸಾಕಿ ಸಹಿತ ಮೂವರು ಕುಸ್ತಿಪಟುಗಳನ್ನು ಹೆಡೆಮುರಿ ಕಟ್ಟಿದ ವಿನೇಶ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಫೈನಲ್ಗೆ ಪ್ರವೇಶಿಸಿದ್ದರು. ಆ ಬಳಿಕ ಅಮೆರಿಕದ ಸಾರಾ ಹಿಲ್ಡ್ಬ್ರಾಂಡ್ ವಿರುದ್ದ ಫೈನಲ್ ಪಂದ್ಯಕ್ಕಿಂತ ಮೊದಲು ವಿನೇಶ್ ನಿಗದಿತ 50 ಕೆಜಿಗಿಂತ 100 ಗ್ರಾಂ ಹೆಚ್ಚು ತೂಕ ಇದ್ದಾರೆಂಬ ಕಾರಣಕ್ಕೆ ಒಲಿಂಪಿಕ್ಸ್ನಿಂದಲೇ ಅನರ್ಹರಾಗಿದ್ದರು.
ಘಟನೆಯ ನಾಟಕೀಯ ತಿರುವುಗಳಿಂದ ಆಘಾತಕ್ಕೊಳಗಾದ ವಿನೇಶ್ ಅವರು ಕಳೆದ ಅನರ್ಹತೆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರೊಂದಿಗೆ ತನಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದ್ದರು. ಲೋಪೆಝ್ ಸೆಮಿ ಫೈನಲ್ನಲ್ಲಿ ವಿನೇಶ್ ವಿರುದ್ದ ಸೋತಿದ್ದರೂ ಫೈನಲ್ಗೆ ಭಡ್ತಿ ನೀಡಲಾಗಿತ್ತು.
ಒಲಿಂಪಿಕ್ಸ್ ಫೈನಲ್ ನಿಂದ ಅನರ್ಹಗೊಂಡ ಒಂದು ದಿನದ ನಂತರ ವಿನೇಶ್ ಕುಸ್ತಿಗೆ ಕಣ್ಣೀರಿನ ವಿದಾಯ ಹೇಳಿದರು. ತನಗೆ ಕುಸ್ತಿಯಲ್ಲಿ ಮುಂದುವರಿಯುವ ಶಕ್ತಿ ಇಲ್ಲ. ಕುಸ್ತಿ ಎದುರು ನಾನು ಸೋತೆ ಎಂದು ಹೇಳಿದ್ದರು.
ಮೂರನೇ ಬಾರಿ ಒಲಿಂಪಿಕ್ ಗೇಮ್ಸ್ನಲ್ಲಿ ಕಾಣಿಸಿಕೊಂಡಿರುವ 29ರ ಹರೆಯದ ವಿನೇಶ್ಗೆ ವಿಶ್ವದಾದ್ಯಂತ ಕ್ರೀಡಾ ದಿಗ್ಗಜರು ಬೆಂಬಲ ವ್ಯಕ್ತಪಡಿಸಿದ್ದರು.
ಸಿಎಎಸ್ ಒಂದು ಜಾಗತಿಕ ಸಂಸ್ಥೆಯಾಗಿದ್ದು ಇದು ಕ್ರೀಡೆಗೆ ಸಂಬಂಧಿಸಿದ ಕಾನೂನು ಸಂಘರ್ಷಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸುತ್ತದೆ.