ಅಮೆರಿಕ: 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣ ರೈತನ ಪುತ್ರ ಪರ್ವೇಝ್ ಖಾನ್
PC : X/@zoo_bear (ಪರ್ವೇಝ್ ಖಾನ್ /ಎಸ್ಇಸಿ ಕ್ರೀಡಾಕೂಟ)
ಲೂಸಿಯಾನ: ಮೇ 11ರಂದು ನಡೆದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತದ ಪರ್ವೇಝ್ ಖಾನ್ ಎಸ್ಇಸಿ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಹರ್ಯಾಣದ ರೈತರೊಬ್ಬರ ಪುತ್ರ ಪರ್ವೇಝ್ ಖಾನ್, 1500 ಮೀಟರ್ ಗುರಿಯನ್ನು 3:42.73 ನಿಮಿಷದಲ್ಲಿ ಕ್ರಮಿಸುವ ಮೂಲಕ ಈ ಕ್ರೀಡಾಕೂಟದಲ್ಲಿ ಎರಡನೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. 1500 ಓಟದ ಸ್ಪರ್ಧೆಯಲ್ಲಿ ಪರ್ವೇಝ್ ಖಾನ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಪ್ರೇಕ್ಷಕರ ಮನಸೂರೆಗೊಂಡರು.
ಹೀಟ್ಸ್ ನಂತರ 1500 ಮೀಟರ್ ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಪರ್ವೇಝ್, ಕ್ರಮವಾಗಿ ಚಿನ್ನ ಮತ್ತು ಕಂಚು ಪದಕವನ್ನು ಜಯಿಸಿದರು.
ತಮ್ಮ ವಿಜಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪರ್ವೇಝ್, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ನನ್ನ ಆರಂಭ ನಿಜವಾಗಲೂ ಉತ್ತಮವಾಗಿರಲಿಲ್ಲ ಎಂದು ಹೇಳಿದರು.
“1500 ಮೀಟರ್ ಓಟವು ನನಗೆ ಸುಲಭವಾಗಿತ್ತು. 1500 ಮೀಟರ್ ಓಟದ ಸ್ಪರ್ಧೆಯ ನಂತರ ನನಗೆ 800 ಮೀಟರ್ ಸ್ಪರ್ಧೆ ಇದ್ದುದರಿಂದ ನಾನು ನನ್ನ ಶೇ. 100ರಷ್ಟು ಪರಿಶ್ರಮವನ್ನು ಹಾಕಲಿಲ್ಲ. ನಾನು ಆರಾಮದಾಯಕ ವೇಗದಲ್ಲಿ ಓಡುತ್ತಿದ್ದೆ ಹಾಗೂ ಕೊನೆಯ 200 ಮೀಟರ್ ಬಾಕಿ ಇರುವಾಗ ಮಾತ್ರ ವೇಗ ಹೆಚ್ಚಿಸಿದೆ” ಎಂದು ಹೇಳಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ 19 ವರ್ಷದ ಪರ್ವೇಝ್ ಖಾನ್, ಹರ್ಯಾಣದ ಮೇವತ್ ಪ್ರಾಂತ್ಯದ ರೈತ ಕುಟುಂಬಕ್ಕೆ ಸೇರಿದ್ದಾರೆ. 2022ರಲ್ಲಿ ಗಾಂಧಿನಗರದಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಡೆದಿದ್ದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.
ಕಳೆದ ವರ್ಷ ಫ್ಲೋರಿಡಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನಕ್ಕೆ ಪಾತ್ರರಾಗಿದ್ದ ಪರ್ವೇಝ್ ಖಾನ್, ಈ ಬಾರಿಯ ಎನ್ಸಿಎಎ ಕ್ರೀಡಾಕೂಟದಲ್ಲಿ ಅದೇ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.
ಈ ಮುನ್ನ ಎನ್ಸಿಎಎ ಕ್ರೀಡಾಕೂಟದಲ್ಲಿ ಮೂವರು ಭಾರತೀಯರು ಚಿನ್ನದ ಪದಕ ಜಯಿಸಿದ್ದರು. ತೇಜಸ್ವಿನ್ ಶಂಕರ್, ಮೊಹಿಂದರ್ ಸಿಂಗ್ ಗಿಲ್ ಹಾಗೂ ವಿಕಾಸ್ ಗೌಡ ಕ್ರಮವಾಗಿ 2018 ಹಾಗೂ 2022ರಲ್ಲಿನ ಹೈಜಂಪ್, ಟ್ರಿಪಲ್ ಜಂಪ್ ಹಾಗೂ 2006ರ ಡಿಸ್ಕಸ್ ಎಸೆತ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.