ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್ | PTI
ಹೊಸದಿಲ್ಲಿ: ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಅವರು ಅನಿಲ್ ಕುಂಬ್ಳೆ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದ ಎರಡನೇ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕಮಿನ್ಸ್ ಒಟ್ಟು 17 ವಿಕೆಟ್ಗಳನ್ನು ಕಬಳಿಸಿದ್ದು 2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಪರ ಕುಂಬ್ಳೆ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶುಕ್ರವಾರ ಚೆನ್ನೈನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಕಮಿನ್ಸ್ ಅವರು ರಾಜಸ್ಥಾನ ತಂಡದ ಬ್ಯಾಟರ್ ಟಾಮ್ ಕೊಹ್ಲೆರ್-ಕಾಡ್ಮೋರ್ ವಿಕೆಟನ್ನು ಪಡೆದು ಈ ಮೈಲಿಗಲ್ಲು ತಲುಪಿದರು.
ನಾಯಕನಾಗಿ ಶೇನ್ ವಾರ್ನ್ ಅವರು ಐಪಿಎಲ್ ಋತುವಿನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯದ ವಾರ್ನ್ 2008ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಒಟ್ಟು 19 ವಿಕೆಟ್ಗಳನ್ನು ಪಡೆದಿದ್ದರು.
ಸನ್ರೈಸರ್ಸ್ ತಂಡ ರವಿವಾರ ಕೆಕೆಆರ್ ವಿರುದ್ಧ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿದ್ದು, ಕಮಿನ್ಸ್ಗೆ ಆಸೀಸ್ ದಂತಕತೆ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟುವ ಹಾಗೂ ಮುರಿಯುವ ಅವಕಾಶವೂ ಇದೆ.
ಐಪಿಎಲ್ ಹರಾಜಿನಲ್ಲಿ 20.50 ಕೋ.ರೂ.ಗೆ ಹೈದರಾಬಾದ್ ತೆಕ್ಕೆಗೆ ಸೇರಿದ್ದ ಕಮಿನ್ಸ್ ಕಳೆದ ವರ್ಷ ಆಸ್ಟ್ರೇಲಿಯ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಹಾಗೂ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಲು ನಾಯಕತ್ವವಹಿಸಿದ್ದರು.