ಬ್ಯಾಟ್ ಮೇಲೆ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಕಾರಣಕ್ಕೆ ದಂಡ: ಅಝಂ ಖಾನ್ ಗೆ ಶೇ. 50 ದಂಡ ರಿಯಾಯಿತಿ ನೀಡಿದ ಪಿಸಿಬಿ
Photo: X/Al__Quraan
ಕರಾಚಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟಿ-20 ಚಾಂಪಿಯನ್ ಶಿಪ್ ನಲ್ಲಿ ತಮ್ಮ ಬ್ಯಾಟ್ ಮೇಲೆ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಕಾರಣಕ್ಕೆ ಪಂದ್ಯದ ಮೊತ್ತದಲ್ಲಿ ಶೇ. 50ರಷ್ಟು ದಂಡಕ್ಕೆ ಗುರಿಯಾಗಿದ್ದ ಅಝಂ ಖಾನ್ ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಂದ್ಯದ ಅಷ್ಟೂ ದಂಡ ಮೊತ್ತವನ್ನು ಮನ್ನಾ ಮಾಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್ ಅವರ ಪುತ್ರನಾದ ಅಝಂ ಖಾನ್, ತಮ್ಮ ಬ್ಯಾಟ್ ಮೇಲಿನ ಫೆಲೆಸ್ತೀನ್ ಧ್ವಜದ ಸ್ಟಿಕರ್ ಅನ್ನು ತೆಗೆಯಲು ನಿರಾಕರಿಸಿದ ಕಾರಣಕ್ಕೆ ಎರಡು ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ರೆಫ್ರಿಯು ಅವರ ವಿರುದ್ಧ ಪಂದ್ಯದ ಮೊತ್ತದ ಶೇ. 50ರಷ್ಟು ದಂಡ ವಿಧಿಸಿದ್ದರು.
ಪಂದ್ಯದ ಸಂದರ್ಭದಲ್ಲಿ ಅಂಪೈರ್ ನೀಡುವ ಸೂಚನೆ ಅಥವಾ ನಿರ್ದೇಶನಗಳನ್ನು ಪಾಲಿಸುವಲ್ಲಿ ಪದೇ ಪದೇ ವಿಫಲವಾಗುವ ಮೂಲಕ ವಿಕೆಟ್ ಕೀಪರ್ ಬ್ಯಾಟರ್ ಆದ ಅಝಂ ಖಾನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೀತಿ ಸಂಹಿತೆಯ ವಿಧಿ 2.4 ಅನ್ನು ಉಲ್ಲಂಘಿಸಿರುವುದು ಕಂಡು ಬಂದಿತ್ತು.
“ಕರಾಚಿಯ ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಲಾಹೋರ್ ಬ್ಲೂಸ್ ತಂಡದ ವಿರುದ್ಧ ರಾಷ್ಟ್ರೀಯ ಟಿ-20 ಕ್ರಿಕೆಟ್ ಕಪ್ 2023-24 ಕ್ರೀಡಾಕೂಟದ ಪಂದ್ಯವಾಡುವಾಗ ಕರಾಚಿ ವೈಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಝಂ ಖಾನ್ ಒಂದನೆ ಹಂತದ ಅಪರಾಧದಲ್ಲಿ ದೋಷಿಯೆಂದು ಸಾಬೀತಾಗಿರುವುದರಿಂದ, ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50ರಷ್ಟು ದಂಡ ವಿಧಿಸಲಾಗಿದೆ” ಎಂದು ಈ ಮುನ್ನ ಪ್ರಕಟಿಸಲಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರಕಾರ, ಉಭಯ ಆಟಗಾರರು ಅಥವಾ ತಂಡಗಳ ಕ್ರಿಕೆಟ್ ಒಕ್ಕೂಟದ ಅಧಿಕಾರಿಗಳು ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಚರಣೆ ಇಲಾಖೆಯ ಅನುಮತಿ ಪಡೆಯದೆ, ಯಾವುದೇ ಆಟಗಾರರು ಹಾಗೂ ತಂಡದ ಅಧಿಕಾರಿಗಳು ತಮ್ಮ ಸಾಧನಗಳ ಮೇಲೆ ವೈಯಕ್ತಿಕ ಸಂದೇಶಗಳನ್ನು ಪ್ರದರ್ಶಿಸುವಂತಿಲ್ಲ ಅಥವಾ ಮುಟ್ಟಿಸುವಂತಿಲ್ಲ.
ಆದರೆ, ಅಝಂ ಖಾನ್ ಗೆ ದಂಡ ವಿಧಿಸಿದ್ದರ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಹಾಗೂ ಜನರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಿಗೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಈ ನಿರ್ಧಾರ ಹೊರಬಿದ್ದಿದೆ.
ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ ಕುರಿತಾಗಲಿ ಅಥವಾ ಉಳಿದ ಪಂದ್ಯಗಳಲ್ಲಿ ಅಝಂ ಖಾನ್ ತಮ್ಮ ಬ್ಯಾಟ್ ಮೇಲಿನ ಸ್ಟಿಕರ್ ಅನ್ನು ತೆಗೆದು ಹಾಕಲು ಒಪ್ಪಿಕೊಂಡಿದ್ದಾರೆಯೆ ಎಂಬ ಕುರಿತಾಗಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
“ಅಝಂ ಖಾನ್ ಗೆ ವಿಧಿಸಿದ್ದ ಶೇ. 50ರಷ್ಟು ದಂಡದ ಕುರಿತು ಪಂದ್ಯದ ಅಧಿಕಾರಿಗಳು ಪರಾಮರ್ಶೆ ನಡೆಸಿದ್ದು, ಈ ದಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮನ್ನಾ ಮಾಡಿದೆ” ಎಂದಷ್ಟೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.