14 ವರ್ಷಗಳ ಗಂಗುಲಿ ದಾಖಲೆ ಮುರಿದ ಫಿಲ್ ಸಾಲ್ಟ್
Photo: X/ cricbuzz
ಹೊಸದಿಲ್ಲಿ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಫಿಲ್ ಸಾಲ್ಟ್ ಸೋಮವಾರ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಸೌರವ್ ಗಂಗೂಲಿ 14 ವರ್ಷಗಳಿಂದ ಹೊಂದಿದ್ದ ದಾಖಲೆಯನ್ನು ಮುರಿಯುವ ಅಮೋಘ ಸಾಧನೆ ಮಾಡಿದರು.
ಐಪಿಎಲ್ ನ ಪ್ರಸ್ತುತ ಋತುವಿನಲ್ಲಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಸಾಲ್ಟ್, ಈಡನ್ ಗಾರ್ಡನ್ಸ್ ನಲ್ಲಿ ಕೇವಲ ಆರು ಇನಿಂಗ್ಸ್ ಗಳಲ್ಲಿ 344 ರನ್ ಕಲೆ ಹಾಕುವ ಮೂಲಕ ಗಂಗೂಲಿ 2010ರಲ್ಲಿ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಕ್ರೀಸ್ ನಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಆಡಿದ ಸಾಲ್ಟ್ ಅವರ ಆಕ್ರಮಣಕಾರಿ ಹೊಡೆತ ಮತ್ತು ನಿರ್ಭೀತಿಯ ಆಟ, ಕೊಲ್ಕತ್ತಾ ಅಭಿಮಾನಿಗಳ ಮನಸ್ಸು ಗೆದ್ದಿದೆ. ಸೌರವ್ ಗಂಗೂಲಿ 7 ಇನಿಂಗ್ಸ್ ಗಳಲ್ಲಿ 331 ರನ್ ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. ಉಳಿದಂತೆ ಆ್ಯಂಡ್ರೆ ರಸೆಲ್ 7 ಇನಿಂಗ್ಸ್ ಗಳಲ್ಲಿ 311, ಕ್ರಿಸ್ ಲಿನ್ 9 ಇನಿಂಗ್ಸ್ ಗಳಲ್ಲಿ 303 ರನ್ ಗಳಿಸಿದ್ದಾರೆ.
ಸಾಲ್ಟ್ ಅವರ ಶಕ್ತಿಶಾಲಿ ಹೊಡೆತಗಳು ಮತ್ತು ಆಕರ್ಷಕ ಡ್ರೈವ್ ಗಳು ಕ್ರೀಡಾಂಗಣದ ಉದ್ದಗಲಕ್ಕೂ ಅನುರಣಿಸಿ, ಈ ಗಮನಾರ್ಹ ಸಾಧನೆಗೆ ಕಾರಣವಾಯಿತು. ಪ್ರತಿ ರನ್ ಗಳಿಸುತ್ತಿದ್ದಂತೆ ಇತಿಹಾಸ ಸೃಷ್ಟಿಯನ್ನು ಸಮೀಪಿಸುತ್ತಿದ್ದ ಸಾಲ್ಟ್ ಕೊನೆಗೆ, ಒಂದೇ ಐಪಿಎಲ್ ಸೀಸನ್ ನಲ್ಲಿ ಈಡನ್ ಗಾರ್ಡನ್ಸ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 33 ಎಸೆತಗಳಲ್ಲಿ 68 ರನ್ ಗಳಿಸಿ ದೆಹಲಿ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಬ್ಯಾಟ್ನಿಂದ 7 ಬೌಂಡರ್ ಹಾಗೂ 5 ಸಿಕ್ಸರ್ ಗಳು ಸಿಡಿದವು.