IPL 2025 | ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ಸಾರಥ್ಯ

ಸೂರ್ಯಕುಮಾರ್ ಯಾದವ್ (X/BCCI)
ಹೊಸದಿಲ್ಲಿ: ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿರುವ ತಪ್ಪಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ್ದ ಮುಂಬೈ ತಂಡ ಆಡಲಿರುವ ಮೊದಲ ಪಂದ್ಯದಲ್ಲಿ ಪಾಂಡ್ಯ ಲಭ್ಯ ಇರುವುದಿಲ್ಲ.
‘‘ನನ್ನ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ’’ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯ ವೇಳೆ ಸ್ವತಃ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದರು. ಈ ವೇಳೆ ತಂಡದ ಪ್ರಧಾನ ಕೋಚ್ ಮಹೇಲ ಜಯವರ್ಧನೆ ಉಪಸ್ಥಿತರಿದ್ದರು.
‘‘ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರು ಈ ವರ್ಷದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಡಲಿರುವ ಮೊದಲ ಪಂದ್ಯದಲ್ಲಿ ಅವರೇ ನಾಯಕನಾಗಿರುತ್ತಾರೆ’’ಎಂದು ತನ್ನ ಅಮಾನತಿನ ಕುರಿತ ಪ್ರಶ್ನೆಗೆ ಪಾಂಡ್ಯ ಪ್ರತಿಕ್ರಿಯಿಸಿದರು.
‘‘ನನ್ನೊಂದಿಗೆ ಮೂವರು ನಾಯಕರಾದ ರೋಹಿತ್ ಶರ್ಮಾ, ಸೂರ್ಯ ಹಾಗೂ ಜಸ್ಪ್ರಿತ್ ಬುಮ್ರಾ ಆಡುತ್ತಿರುವುದು ನನ್ನ ಅದೃಷ್ಟ. ಅವರು ಯಾವಾಗಲೂ ನನಗೆ ಬೆಂಬಲ ನೀಡುತ್ತಾರೆ. ನನಗೆ ಅಗತ್ಯವಿದ್ದಾಗ ಎಲ್ಲ ರೀತಿಯ ನೆರವು ನೀಡುತ್ತಾರೆ’’, ಎಂದು ಪಾಂಡ್ಯ ಹೇಳಿದ್ದಾರೆ.
ಬುಮ್ರಾ ಅವರು ಬೆನ್ನುನೋವಿನಿಂದ ಚೇತರಿಸಿಕೊಂಡು ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾವಾಗ ವಾಪಸಾಗುತ್ತಾರೆ ಎಂಬ ಬಗ್ಗೆ ಖಚಿತತೆ ಇಲ್ಲವಾಗಿದೆ.
ಬುಮ್ರಾ ಅವರು ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿದ್ದಾರೆ ಎಂದು ಕೋಚ್ ಜಯವರ್ಧನೆ ದೃಢಪಡಿಸಿದರು.
‘‘ಬುರ್ಮಾ ಕುರಿತು ಬಿಸಿಸಿಐ ವೈದ್ಯಕೀಯ ತಂಡದ ಫೀಡ್ಬ್ಯಾಕ್ ಏನಿದೆ ಎಂಬ ಬಗ್ಗೆ ನಾವು ಕಾದು ನೋಡಲಿದ್ದೇವೆ. ಅವರು ಇದೀಗ ಉತ್ತಮ ಸ್ಫೂರ್ತಿಯಲ್ಲಿದ್ದಾರೆ. ಶೀಘ್ರವೇ ತಂಡವನ್ನು ಸೇರಲಿದ್ದಾರೆ ಎಂಬ ವಿಶ್ವಾಸವಿದೆ. ಅವರ ಅನುಪಸ್ಥಿತಿ ನಮಗೆ ಸವಾಲಾಗಿದೆ. ಇದು ಬೇರೊಬ್ಬ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸಲು ಇರುವ ಅವಕಾಶವಾಗಿದೆ’’ಎಂದು ಜಯವರ್ಧನೆ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು 2012ರಿಂದ ಐಪಿಎಲ್ ಋತುವಿನ ಮೊದಲ ಪಂದ್ಯವನ್ನು ಜಯಿಸಿಲ್ಲ. ಹಾರ್ದಿಕ್ ಹಾಗೂ ಬುಮ್ರಾ ಅವರ ಅನುಪಸ್ಥಿತಿಯು ಮುಂಬೈ ತಂಡಕ್ಕೆ ಉತ್ತಮ ಆರಂಭ ಪಡೆಯಲು ತೊಡಕಾಗಿದೆ.
‘‘ನಮಗೆ ಕಠಿಣ ಸವಾಲು ಎದುರಾಗಿದೆ’’ ಎಂದು ಕೋಚ್ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.