ಟೆಸ್ಟ್ ಪಂದ್ಯಗಳಲ್ಲಾಡುವುದು ವಿಭಿನ್ನ ಅನುಭವ: ವಿರಾಟ್ ಕೊಹ್ಲಿ
ಹೊಸದಿಲ್ಲಿ: "ಟೆಸ್ಟ್ ಪಂದ್ಯಗಳು ಕ್ರಿಕೆಟ್‌ನ ಬುನಾದಿ. ಅದೊಂದು ಇತಿಹಾಸ. ಅದೊಂದು ಸಂಸ್ಕೃತಿ. ಅದೊಂದು ಪರಂಪರೆ. ಅದು ಎಲ್ಲವೂ ಕೂಡಾ. ನೀವು ನಾಲ್ಕೈದು ದಿನಗಳ ನಂತರ ಬೇರೆಡೆ ಬಂದಾಗ, ನೀವು ಅಲ್ಲಿಯವರೆಗೆ ಅನುಭವಿಸಿದ್ದ ಭಾವನೆಗಿಂತ ವಿಭಿನ್ನ ಅನುಭವ ಅದಾಗಿರುತ್ತದೆ. ವೈಯಕ್ತಿಕವಾಗಿ, ಒಂದು ತಂಡವಾಗಿ ಸುದೀರ್ಘ ಇನಿಂಗ್ಸ್ ಆಡಿದಾಗ ಮತ್ತು ನೀವು ಟೆಸ್ಟ್ ಪಂದ್ಯವನ್ನು ಗೆದ್ದ ತಂಡವಾದಾಗ ಅದೊಂದು ವಿಶೇಷ ಭಾವನೆಯಾಗಿರುತ್ತದೆ. ಕೆಲಸದ ಸಂತೃಪ್ತಿ ಮನೆ ಮಾಡಿರುತ್ತದೆ" ಎಂದು ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
Star Sports ಗೆ ವಿಶ್ವಕಪ್ ನಂತರ ಇದೇ ಪ್ರಥಮ ಬಾರಿಗೆ ಸಂದರ್ಶನ ನೀಡಿರುವ ವಿರಾಟ್ ಕೊಹ್ಲಿ, "ನಾನು ಬಿಳಿಯ ಉಡುಪಿನಲ್ಲಿ ಟೆಸ್ಟ್ ಪಂದ್ಯವನ್ನು ಆಡುವಾಗ ಸಂಪ್ರದಾಯವಾದಿಯಾಗಿರುತ್ತೇನೆ. ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಎಲ್ಲವೂ. ದೇಶಕ್ಕಾಗಿ ನೂರಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಆಡಿರುವುದರಿಂದ ನಿಜಕ್ಕೂ ಸಮ್ಮಾನಿತನಾಗಿದ್ದೇನೆ. ಟೆಸ್ಟ್ ಕ್ರಿಕೆಟಿಗನಾಗಬೇಕು ಎಂಬ ನನ್ನ ಕನಸನ್ನು ಮುಂದುವರಿಸಲಿದ್ದೇನೆ" ಎಂದು ಹೇಳಿದ್ದಾರೆ.
ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದೆದುರು ಭಾರತ ತಂಡವು ಪರಾಭವಗೊಂಡ ನಂತರ ವಿರಾಟ್ ಕೊಹ್ಲಿ ನೀಡಿರುವ ಪ್ರಥಮ ಸಂದರ್ಶನ ಇದಾಗಿದೆ.
ಈ ನಡುವೆ, ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ತಂಡದೆದುರು ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮರಳಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೃಢಪಡಿಸಿದೆ.