"ನಿಗೂಢ ಕೇರಮ್ ಬಾಲ್ ಎಸೆದಿದ್ದೀರಿ": ದಿಢೀರ್ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್ ಗೆ ಪತ್ರ ಬರೆದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ / ಆರ್. ಅಶ್ವಿನ್ (Photo: PTI)
ಹೊಸದಿಲ್ಲಿ: ಭಾರತ ತಂಡದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರ ಅಚ್ಚರಿಯ ನಿವೃತ್ತಿ ಪ್ರಕಟಣೆ ವಿಶ್ವಾದ್ಯಂತ ಇರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡಾ ತಮ್ಮ ಆಘಾತ ವ್ಯಕ್ತಪಡಿಸಿದ್ದು, “ನೀವು ಮತ್ತಷ್ಟು ಆಫ್ ಬ್ರೇಕ್ ಬಾಲ್ ಗಳನ್ನು ಎಸೆಯಬಹುದು ಎಂದು ನಿರೀಕ್ಷಿಸುತ್ತಿದ್ದವರು ಅಚ್ಚರಿಗೊಳ್ಳುವಂತೆ ನಿಗೂಢ ಕೇರಮ್ ಬಾಲ್ ಎಸೆದಿದ್ದೀರಿ” ಎಂದು ಆರ್.ಅಶ್ವಿನ್ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
2022ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಕ್ರೀಡಾಕೂಟದಲ್ಲಿನ ಪಾಕಿಸ್ತಾನ ತಂಡದೆದುರಿನ ಪಂದ್ಯವನ್ನೂ ಉಲ್ಲೇಖಿಸಿರುವ ಅವರು, “ಯಾವುದಾದರೂ ಬ್ಯಾಟರ್ ಹೊಡೆದ ಅದ್ಭುತ ಹೊಡೆತವನ್ನು ಜನರು ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತಾರೆ. ಆದರೆ, 2022ರ ವಿಶ್ವಕಪ್ ನಲ್ಲಿನ ಪಂದ್ಯದಲ್ಲಿ ನೀವು ಹೊಡೆದ ಹೊಡೆತ ಹಾಗೂ ನೀವು ಅದಕ್ಕೂ ಮುಂಚಿನ ಚೆಂಡನ್ನು ಹಾಗೆಯೇ ಹೋಗಲು ಬಿಟ್ಟ ರೀತಿ ಯಾವಾಗಲೂ ಸ್ಮರಣೀಯವಾಗಿ ಉಳಿಯಲಿದೆ. ನೀವು ಹೊಡೆದ ಗೆಲುವಿನ ಹೊಡೆತ ಭಾರಿ ಸಂಭ್ರಮವನ್ನುಂಟು ಮಾಡಿತು. ನೀವು ಆ ಹೊಡೆತ ಹೊಡೆಯುವುದಕ್ಕೂ ಮುಂಚಿನ ಬಾಲ್ ಅನ್ನು ಹಾಗೆಯೇ ಬಿಟ್ಟು, ಅದು ವೈಡ್ ಆಗುವಂತೆ ನೋಡಿಕೊಂಡಿದ್ದು ನಿಮ್ಮ ವಿವೇಚನಾ ಶಕ್ತಿಯನ್ನು ಸೂಚಿಸುತ್ತದೆ” ಎಂದೂ ಪ್ರಶಂಸಿಸಿದ್ದಾರೆ.
38 ವರ್ಷದ ಭಾರತೀಯ ಆಫ್ ಸ್ಪಿನ್ನರ್ ಆರ್.ಅಶ್ವಿನ್, ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿಯ ಅಂಗವಾಗಿ ಬ್ರಿಸ್ಬೇನ್ ನಲ್ಲಿ ನಡೆಯುತ್ತಿದ್ದ ಮೂರನೆ ಟೆಸ್ಟ್ ಪಂದ್ಯದ ವೇಳೆ ದಿಢೀರನೆ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಈ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದರೂ, ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ ನಂತರ ಆರ್.ಅಶ್ವಿ್ನ್ ತವರಿಗೆ ಮರಳಿದ್ದರು.