ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ನೀರಜ್ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಹೊಸದಿಲ್ಲಿ: ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ 2023 ರಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟ ನಂತರ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.
ನೀರಜ್ 12 ಸ್ಪರ್ಧಿಗಳಿದ್ದ ಫೈನಲ್ ನಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 88.17 ಮೀಟರ್ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿದರು ಹಾಗೂ ಕೊನೆಯವರೆಗೂ ತಮ್ಮ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
X ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಸಾಧನೆಯನ್ನು ಹೊಗಳಿ ಪೋಸ್ಟ್ ಮಾಡಿದ್ದಾರೆ,
"ಪ್ರತಿಭಾನ್ವಿತ ನೀರಜ್ ಚೋಪ್ರಾ ಶ್ರೇಷ್ಠತೆಗೊಂಡು ನಿದರ್ಶನ. ಅವರ ಸಮರ್ಪಣಭಾವ, ನಿಖರತೆ ಹಾಗೂ ಉತ್ಸಾಹವು ಅವರನ್ನು ಅತ್ಲೆಟಿಕ್ಸ್ನಲ್ಲಿ ಕೇವಲ ಚಾಂಪಿಯನ್ ಆಗಿಸದೆ ಇಡೀ ಕ್ರೀಡಾ ಜಗತ್ತಿನಲ್ಲಿ ಅಪ್ರತಿಮ ಶ್ರೇಷ್ಠತೆಯ ಸಂಕೇತವನ್ನಾಗಿಸಿದೆ. ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನವನ್ನು ಜಯಿಸಿರುವ ಅವರಿಗೆ ಅಭಿನಂದನೆಗಳು" ಎಂದು ಬರೆದಿದ್ದಾರೆ
ಕಾಮ ನ್ವೆಲ್ತ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರ ಈಟಿ ಎಸೆದು ಬೆಳ್ಳಿಗೆ ತೃಪ್ತಿಪಟ್ಟರು. ಝೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು 86.67 ಮೀ ಎಸೆದು ಕಂಚಿನ ಪದಕ ಪಡೆದರು.
ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ಕಿಶೋರ್ ಜೆನಾ (ಅತ್ಯುತ್ತಮ 84.77 ಮೀ) ಐದನೇ ಸ್ಥಾನ ಗಳಿಸಿದರೆ, ಡಿ.ಪಿ. ಮನು (ಅತ್ಯುತ್ತಮ 84.14 ಮೀ) ಆರನೇ ಸ್ಥಾನ ಪಡೆದರು.
ಇದೀಗ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತವು ಎಲ್ಲಾ ಬಣ್ಣಗಳ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ಬೆಳ್ಳಿ ಗೆದ್ದ ನಂತರ ನೀರಜ್ಗೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಇದು ಎರಡನೇ ಪದಕವಾಗಿದೆ. ಪ್ರತಿಷ್ಠಿತ ವಿಶ್ವ ಕ್ರೀಡಾಕೂಟದಲ್ಲಿ ಭಾರತಕ್ಕೆ ಕೊನೆಯ ಬಾರಿ ಪದಕವನ್ನು ಅಂಜು ಬಾಬಿ ಜಾರ್ಜ್ ಅವರು 2003ರಲ್ಲಿ ಗೆದ್ದುಕೊಟ್ಟಿದ್ದರು. ಆಗ ಅವರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ ಲಾಂಗ್ ಜಂಪ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.