ಜೂನಿಯರ್ ಹಾಕಿ ತಂಡಕ್ಕೆ ಪಿ.ಆರ್.ಶ್ರಿಜೇಶ್ ಕೋಚ್
ಪಿ.ಆರ್.ಶ್ರಿಜೇಶ್ | PC ; PTI
ಹೊಸದಿಲ್ಲಿ : ಮೊನ್ನೆಯಷ್ಟೇ ನಿವೃತ್ತಿಯಾಗಿರುವ ಭಾರತೀಯ ಹಾಕಿ ತಂಡದ ಗೋಲ್ಕೀಪರ್ ಪಿ.ಆರ್.ಶ್ರಿಜೇಶ್ ಜೂನಿಯರ್ ರಾಷ್ಟ್ರೀಯ ತಂಡದ ಕೋಚ್ ಆಗುವ ಮೂಲಕ ತನ್ನ ವೃತ್ತಿಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.
ಶ್ರಿಜೇಶ್ ಅವರು ಹೊಸ ಹುದ್ದೆವಹಿಸಿಕೊಳ್ಳುವುದನ್ನು ಖಚಿತಪಡಿಸಿರುವ ಹಾಕಿ ಇಂಡಿಯಾವು ಶೀಘ್ರವೇ ಶ್ರಿಜೇಶ್ ನೇಮಕವನ್ನು ಪ್ರಕಟಿಸಲಿದೆ.
36ನೇ ವಯಸ್ಸಿನಲ್ಲಿ ನಿವೃತ್ತಿಯಾಗಿರುವ ಶ್ರಿಜೇಶ್, ಭಾರತೀಯ ಹಾಕಿ ತಂಡದ ಗ್ರೇಟ್ ವಾಲ್(ಮಹಾಗೋಡೆ)ಎಂದೇ ಖ್ಯಾತಿ ಪಡೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪೇನ್ ವಿರುದ್ಧ ಕಂಚಿನ ಪದಕದ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ತನ್ನ 18 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.
ಭಾರತ ಕಂಡ ಶ್ರೇಷ್ಠ ಗೋಲ್ಕೀಪರ್ ಆಗಿರುವ ಶ್ರಿಜೇಶ್ ಅವರು 2020ರ ಟೋಕಿಯೊ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಹೌದು, ಇನ್ನು ಕೆಲವೇ ದಿನಗಳಲ್ಲಿ ಶ್ರಿಜೇಶ್ರನ್ನು ಪುರುಷರ ಜೂನಿಯರ್ ತಂಡದ(ಅಂಡರ್-21)ಕೋಚ್ ಆಗಿ ನೇಮಿಸಲಿದ್ದೇವೆ. ನಾವು ಅವರೊಂದಿಗೆ ಈ ಕುರಿತು ಚರ್ಚಿಸಿದ್ದೇವೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಶ್ರಿಜೇಶ್ಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. ಅವರಲ್ಲಿ ಅಸಾಮಾನ್ಯ ಸಾಮರ್ಥ್ಯವಿದೆ. ಬ್ರಿಟನ್ ವಿರುದ್ಧ ಪ್ಯಾರಿಸ್ನಲ್ಲಿ ಅದನ್ನು ಅವರು ತೋರ್ಪಡಿಸಿದ್ದಾರೆ. ಅವರು ಗೋಲ್ಕೀಪರ್ಗಳ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ಟಿರ್ಕಿ ತಿಳಿಸಿದ್ದಾರೆ.