ಚೆಸ್ ವಿಶ್ವಕಪ್ ಸೆಮಿಫೈನಲ್ ತಲುಪಿದ ಪ್ರಜ್ಞಾನಂದ: ವಿಶ್ವನಾಥನ್ ಆನಂದ್ ಬಳಿಕ ಮೊಟ್ಟಮೊದಲ ಭಾರತೀಯ
Photo: twitter.com/ChessbaseIndia
ಹೊಸದಿಲ್ಲಿ: ಹದಿಹರೆಯದ ಸ್ನೇಹಿತರಾದ ಎರಿಗೈಸಿ ಅರ್ಜುನ್ ಹಾಗೂ ಆರ್.ಪ್ರಜ್ಞಾನಂದ ನಡುವಿನ ತೀವ್ರ ಹೋರಾಟದ ಬಳಿಕ ವಿಶ್ವಕಪ್ ಚೆಸ್ ಕ್ವಾರ್ಟರ್ ಫೈನಲ್ಸ್ನಲ್ಲಿ ಪ್ರಜ್ಞಾನಂದ ಮುಂದಿನ ಹಂತಕ್ಕೆ ತೇರ್ಗಡೆಯಾದರು. ಬಕುವಿನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾದರು.
18 ವರ್ಷ ವಯಸ್ಸಿನ ಉದಯೋನ್ಮುಖ ಚೆಸ್ ತಾರೆ ಸೆಮಿಫೈನಲ್ನಲ್ಲಿ ಫೆಬಿಯಾನೊ ಕರೋನಾ ಜತೆ ಸೆಣೆಸಲಿದ್ದು, ಕನಿಷ್ಠ 50 ಸಾವಿರ ಡಾಲರ್ ಬಹುಮಾನ ಖಾತರಿಪಡಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು 2024ರ ಅಭ್ಯರ್ಥಿಗಳ ಟೂರ್ನಿಗೆ ಆಯ್ಕೆಯಾಗಿದ್ದು, ಇದರಲ್ಲಿ ವಿಜೇತರಾದವರು ವಿಶ್ವ ಚೆಸ್ ಕಿರೀಟಕ್ಕಾಗಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಸೆಣೆಸಬೇಕಾಗುತ್ತದೆ.
ಮೊದಲ ಎರಡು ರ್ಯಾಪಿಡ್ ಗೇಮ್ಗಳು ಡ್ರಾನಲ್ಲಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯರ ನಡುವೆ 10 ನಿಮಿಷಗಳ ಟೈಬ್ರೇಕರ್ ಆಟ ತೀವ್ರ ಪೈಪೋಟಿಯಿಂದ ಕೂಡಿತ್ತು.
"ರೋಮಾಂಚಕ ಪಂದ್ಯ... ಕೆಲವೊಂದು ತಪ್ಪುಗಳು ಇದ್ದವು.. ಆದರೆ ಆಟಗಾರರು ನಂಬಲಸಾಧ್ಯ ಹೋರಾಟವನ್ನು ಕೊನೆಯವರೆಗೂ ನಡೆಸಿದರು" ಎಂದು ಹಿರಿಯ ಗ್ರ್ಯಾಂಡ್ಮಾಸ್ಟರ್ ಪೀಟರ್ ಲೊಕೊ ವೆಬ್ಕಾಸ್ಟ್ನಲ್ಲಿ ಹೇಳಿದರು.
"ಅತೀವ ಸಂತಸವಾಗಿದೆ" ಎಂದು ಸೆಮಿಫೈನಲ್ ಸಾಧನೆ ಮಾಡಿದ ಪ್ರಜ್ಞಾನಂದ ಉದ್ಗರಿಸಿದರು. "ಇದು ಸುಲಭ ಎಂದೆನಿಸಲಿಲ್ಲ.. ನಾವು ತೀವ್ರ ಹೋರಾಟ ನಡೆಸಿದೆವು ಹಾಗೂ ಬಿಳಿಕಾಯಿಗಳೊಂದಿಗೆ ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಮುಖ್ಯವಾಗಿ ನನಗೆ ಬಿಳಿಕಾಯಿಯಲ್ಲಿ ಹೊಸ ಐಡಿಯಾ ಪಡೆಯುವುದು ಕಷ್ಟ. ಅರ್ಜುನ್ ಎರಡೂ ಬಣ್ಣಗಳಲ್ಲಿ ಅದರಲ್ಲೂ ಕಪ್ಪುಕಾಯಿಯಲ್ಲಿ ಪ್ರಬಲರು. ನಾನು ಶಾಂತಚಿತ್ತದಿಂದ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದೆ. ವಿಶ್ವಕಪ್ ಉಮೇದುವಾರಿಕೆ ಬಗ್ಗೆ ಯೋಚಿಸದೇ ಆಟದ ಮೇಲಷ್ಟೇ ಗಮನ ಹರಿಸಿದೆ. ಏನೂ ಮಾಡದೇ 30 ಸೆಕೆಂಡ್ಗಳನ್ನು ಕಳೆಯುವ ಮೂಲಕ ಅಧೀರನಾದೆ. ಆದರೆ ತಕ್ಷಣ ಚೇತರಿಸಿಕೊಳ್ಳಲು ಸಾಧ್ಯವಾಯಿತು" ಎಂದು ಬಣ್ಣಿಸಿದರು.